ಟಿಎಂಸಿಗೆ ಬಿಜೆಪಿ ಶಾಸಕನ ಸೇರ್ಪಡೆಯ ಬಳಿಕ ಶಾಸಕರಿಗೆ ಪಿಂಚಣಿ, ಭತ್ಯೆ ಪಡೆಯುವ ನಿಯಮಗಳನ್ನು ಬದಲಿಸಿದ ತ್ರಿಪುರಾ

Photo: Twitter/ @AITCofficial
ಅಗರ್ತಲಾ, ನ.3: ತ್ರಿಪುರಾದ ಬಿಜೆಪಿ ಶಾಸಕ ಆಶಿಷ ದಾಸ್ ಅವರು ಎರಡು ದಿನಗಳ ಹಿಂದೆ ಟಿಎಂಸಿಗೆ ಸೇರ್ಪಡೆಗೊಂಡ ಬೆನ್ನಿಗೇ ರಾಜ್ಯ ಸಂಪುಟವು ಶಾಸಕನೋರ್ವ ಪಿಂಚಣಿ ಮತ್ತು ಇತರ ಭತ್ಯೆಗಳನ್ನು ಪಡೆಯಲು ಕನಿಷ್ಠ ಐದು ವರ್ಷ ಅಧಿಕಾರದಲ್ಲಿರುವುದನ್ನು ಕಡ್ಡಾಯಗೊಳಿಸಿದೆ. ಹಿಂದೆ ರಾಜ್ಯದಲ್ಲಿ ಎಡರಂಗದ ಆಡಳಿತವಿದ್ದಾಗ ಶಾಸಕರು ಈ ಸೌಲಭ್ಯಗಳನ್ನು ಪಡೆದುಕೊಳ್ಳಲು ಕನಿಷ್ಠ ನಾಲ್ಕು ವರ್ಷಗಳ ಅಧಿಕಾರಾವಧಿಯನ್ನು ಪೂರ್ಣಗೊಳಿಸಬೇಕಿತ್ತು. ಬಿಜೆಪಿ-ಐಪಿಎಫ್ಟಿ ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಈ ಅವಧಿಯನ್ನು ಕೇವಲ ಒಂದು ದಿನಕ್ಕೆ ತಗ್ಗಿಸಲಾಗಿತ್ತು.
ಮಂಗಳವಾರ ರಾತ್ರಿ ಸಂಪುಟದ ನಿರ್ಧಾರವನ್ನು ಪ್ರಕಟಿಸಿದ ವಾರ್ತಾ ಮತ್ತು ಸಾಂಸ್ಕೃತಿಕ ವ್ಯವಹಾರಗಳ ಸಚಿವ ಸುಶಾಂತ ಚೌಧುರಿ ಅವರು, ಶಾಸಕರ ಉತ್ತರದಾಯಿತ್ವವನ್ನು ಹೆಚ್ಚಿಸಲು ಸರಕಾರವು ಈ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ತಿಳಿಸಿದರು.
ವಿಧಾನಸಭೆಯ ಎಲ್ಲ ಹಾಲಿ ಮತ್ತು ಭವಿಷ್ಯದ ಸದಸ್ಯರು ತಮಗೆ ಒದಗಿಸಲಾಗಿರುವ ಸೌಲಭ್ಯಗಳನ್ನು ಪಡೆಯಲು ಕನಿಷ್ಠ ಒಂದು ಅಧಿಕಾರಾವಧಿಯನ್ನು ಪೂರ್ಣಗೊಳಿಸಬೇಕಾಗುತ್ತದೆ. ನಂತರದ ಅವಧಿಯಲ್ಲಿ ಶಾಸಕರಾಗದವರಿಗೂ ಇದು ಅನ್ವಯಿಸುತ್ತದೆ ಎಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚೌಧುರಿ ಹೇಳಿದರು.
2018ರಲ್ಲಿ ಆಯ್ಕೆಯಾಗಿರುವ ಹಾಲಿ ಶಾಸಕರು ಮತ್ತು ಭವಿಷ್ಯದ ಶಾಸಕರು ತಿದ್ದುಪಡಿ ಮಾಡಲಾಗಿರುವ ನಿಯಮಗಳ ವ್ಯಾಪ್ತಿಗೊಳಪಡುತ್ತಾರೆ ಎಂದು ಆಶಿಷ ದಾಸ್ ಅವರನ್ನು ಹೆಸರಿಸದೆ ಚೌಧುರಿ ತಿಳಿಸಿದರು.
ಎಡರಂಗದ ಆಡಳಿತದಲ್ಲಿ ಶಾಸಕರು ಮಾಸಿಕ 17,250 ರೂ.ಪಿಂಚಣಿಗೆ ಅರ್ಹರಾಗಿದ್ದರು,ಜೊತೆಗೆ ಶಾಸಕರ ಮತ್ತು ಅವರ ಪತ್ನಿಯ ವೈದ್ಯಕೀಯ ವೆಚ್ಚವನ್ನು ಸರಕಾರವೇ ಭರಿಸುತ್ತಿತ್ತು. 2018ರಲ್ಲಿ ಬಿಜೆಪಿ-ಐಪಿಎಫ್ಟಿ ಸರಕಾರವು ಅಧಿಕಾರಕ್ಕೆ ಬಂದ ಬಳಿಕ ಪಿಂಚಣಿ ಮೊತ್ತವನ್ನು ಇಮ್ಮಡಿಗೊಳಿಸಿ 34,500 ರೂ.ಮಾಡಲಾಗಿತ್ತು ಮತ್ತು ಇತರ ಸೌಲಭ್ಯಗಳು ಯಥಾಸ್ಥಿತಿಯಲ್ಲಿ ಮುಂದುವರಿದಿದ್ದವು. ಆದರೆ ಈ ಸೌಲಭ್ಯಗಳನ್ನು ಪಡೆಯಲು ಕನಿಷ್ಠ ಅಧಿಕಾರಾವಧಿಯನ್ನು ‘ಯಾವುದೇ ಅವಧಿ’ಗೆ ತಗ್ಗಿಸಲಾಗಿತ್ತು. ಅಂದರೆ ಕೇವಲ ಒಂದು ದಿನದ ಮಟ್ಟಿಗೆ ಶಾಸಕರಾಗಿದ್ದವರೂ ಈ ಎಲ್ಲ ಸೌಲಭ್ಯಗಳಿಗೆ ಅರ್ಹರಾಗಿದ್ದರು.
ಸಂಪುಟದ ಮಂಗಳವಾರದ ನಿರ್ಧಾರವು ಕನಿಷ್ಠ ಅವಧಿಯನ್ನು ಕಡ್ಡಾಯ ಪೂರ್ಣಾವಧಿಗೆ ಅಥವಾ ಐದು ವರ್ಷಗಳಿಗೆ ಮರಳಿ ಬದಲಿಸಿದೆ.







