ಉತ್ತರ ಪ್ರದೇಶ: ನಿವೃತ್ತ ಇನ್ಸ್ಪೆಕ್ಟರ್ ವಿರುದ್ಧ ಅತ್ಯಾಚಾರ ಆರೋಪ ಮಾಡಿದ್ದ ಬಾಲಕಿಯ ತಂದೆಯ ನಿಗೂಢ ಸಾವು

ಕಾನ್ಪುರ: ನಿವೃತ್ತ ಇನ್ಸ್‌ಪೆಕ್ಟರ್ ದಿನೇಶ್ ತ್ರಿಪಾಠಿ ವಿರುದ್ಧ ಅತ್ಯಾಚಾರ ಆರೋಪ ಮಾಡಿದ್ದ ಬಾಲಕಿಯ ತಂದೆ ಸೋಮವಾರ ಸಂಜೆ ನಿಗೂಢವಾಗಿ ಸಾವನ್ನಪ್ಪಿದ್ದಾರೆ ಎಂದು timesofindia ವರದಿ ಮಾಡಿದೆ.
ಸಂಬಂಧಿಕರು ಮೃತದೇಹವನ್ನು ಅವರ ಅಂತ್ಯಕ್ರಿಯೆಗಾಗಿ ಅವರ ಸ್ವಗ್ರಾಮಕ್ಕೆ ಕೊಂಡೊಯ್ದರು, ಆದರೆ ವಿಷಯ ತಿಳಿದ ತಕ್ಷಣ ಪೊಲೀಸರು ಗ್ರಾಮಕ್ಕೆ ತಲುಪಿ ಮೃತದೇಹವನ್ನು ತಮ್ಮ ವಶಕ್ಕೆ ತೆಗೆದುಕೊಂಡು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ನಂತರವೇ ಅಂತ್ಯಕ್ರಿಯೆ ನಡೆಯಲಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಯಾಗ್‌ರಾಜ್‌ನ ನಿವಾಸಿಯಾಗಿರುವ ನಿವೃತ್ತ ಇನ್ಸ್‌ಪೆಕ್ಟರ್ ದಿನೇಶ್ ತ್ರಿಪಾಠಿ ಕಾನ್ಪುರದಲ್ಲಿ ದೀರ್ಘಕಾಲ ನಿಯೋಜನೆಗೊಂಡಿದ್ದು, ಚಾಕೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸವಾಗಿದ್ದರು. ಬಾಲಕಿಯ ತಂದೆಯನ್ನು ತನ್ನ ಮನೆಯಲ್ಲಿ ಕೇರ್ ಟೇಕರ್ ಆಗಿ ನೇಮಿಸಿಕೊಂಡಿದ್ದರು.
ಆಗಸ್ಟ್ 11, 2020 ರಂದು ದಿನೇಶ್ ತ್ರಿಪಾಠಿ ತನ್ನ ಕೇರ್ ಟೇಕರ್ ನ 11 ವರ್ಷದ ಮಗಳ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.
ನಿವೃತ್ತ ಇನ್ಸ್‌ಪೆಕ್ಟರ್ ತನ್ನ ಮೇಲೆ ಈ ಹಿಂದೆ ನಾಲ್ಕು ಬಾರಿ ಅತ್ಯಾಚಾರ ಎಸಗಿದ್ದಾರೆ ಎಂದು ಬಾಲಕಿ ನ್ಯಾಯಾಲಯಕ್ಕೆ ನೀಡಿದ ಹೇಳಿಕೆಯಲ್ಲಿ ಆರೋಪಿಸಿದ್ದು, ಅಂದಿನಿಂದ ನಿವೃತ್ತ ಇನ್ಸ್‌ಪೆಕ್ಟರ್ ಜೈಲಿನಲ್ಲಿದ್ದಾರೆ.
ಸಂತ್ರಸ್ತೆಯ 42 ವರ್ಷದ ತಂದೆ ಸೋಮವಾರ ಸಂಜೆ ಸಾವನ್ನಪ್ಪಿದ್ದಾರೆ. ಜಿಲ್ಲೆಯ ಸರ್ಸಾಲ್ ಪ್ರದೇಶದಲ್ಲಿ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲು ಮೃತದೇಹವನ್ನು ಅವರ ಸ್ಥಳೀಯ ಗ್ರಾಮಕ್ಕೆ ಕೊಂಡೊಯ್ಯಲಾಯಿತು. ವಿಷಯ ತಿಳಿದ ಚಕೇರಿ ಪೊಲೀಸರು ಗ್ರಾಮಕ್ಕೆ ಆಗಮಿಸಿ ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.