ಸೆಪ್ಟೆಂಬರ್ ನಲ್ಲಿ ಭಾರತದಲ್ಲಿ 76,967 ವಿಷಯಗಳನ್ನು ತೆಗೆದುಹಾಕಿದ ಗೂಗಲ್: ಪಾರದರ್ಶಕತೆ ವರದಿಯಲ್ಲಿ ಮಾಹಿತಿ

ಹೊಸದಿಲ್ಲಿ: ಬಳಕೆದಾರರಿಂದ ಪಡೆದ 29,842 ದೂರುಗಳ ಹಿನ್ನೆಲೆಯಲ್ಲಿ ಗೂಗಲ್ ಆ ದೂರುಗಳ ಆಧಾರದಲ್ಲಿ 76,967 ವಿಷಯಗಳನ್ನು ಸೆಪ್ಟೆಂಬರ್ ತಿಂಗಳಿನಲ್ಲಿ ತೆಗೆದು ಹಾಕಿದೆ ಎಂದು ತನ್ನ ಮಾಸಿಕ ಪಾರದರ್ಶಕತೆ ವರದಿಯಲ್ಲಿ ಗೂಗಲ್ ಹೇಳಿದೆ. ಬಳಕೆದಾರರ ದೂರುಗಳ ಹೊರತಾಗಿ ಸ್ವಯಂಚಾಲಿತ ಪತ್ತೆಯಾನುಸಾರ 4,50,246 ವಿಚಾರಗಳ ಕುರಿತ ಮಾಹಿತಿಯನ್ನೂ ಗೂಗಲ್ ಈ ಅವಧಿಯಲ್ಲಿ ತೆಗೆದುಹಾಕಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಆಗಸ್ಟ್ ತಿಂಗಳಲ್ಲಿ ಗೂಗಲ್ ತನ್ನ ಬಳಕೆದಾರರಿಂದ 35,191 ದೂರುಗಳನ್ನು ಪಡೆದಿತ್ತು ಹಾಗೂ ಈ ದೂರುಗಳ ಆಧಾರದಲ್ಲಿ 93,550 ವಿಷಯಗಳನ್ನು ತೆಗೆದು ಹಾಕಿತ್ತು. ಇವುಗಳ ಹೊರತಾಗಿ 6,51,933 ವಿಷಯಗಳನ್ನೂ ಸ್ವಯಂಚಾಲಿತ ಪತ್ತೆಯ ಹಿನ್ನೆಲೆಯಲ್ಲಿ ತೆಗೆದು ಹಾಕಲಾಗಿದೆ.
ಭಾರತ ಸರಕಾರದ ಹೊಸ ಐಟಿ ನಿಯಮಗಳಾನುಸಾರ ಗೂಗಲ್ ಈ ವರದಿಗಳನ್ನು ಬಿಡುಗಡೆ ಮಾಡಿದೆ.
ತನ್ನ ಇತ್ತೀಚಿನ ವರದಿಯಲ್ಲಿ ಗೂಗಲ್ ನೀಡಿದ ಮಾಹಿತಿಯಂತೆ, ಸೆಪ್ಟೆಂಬರ್ ತಿಂಗಳಲ್ಲಿ ತನಗೆ ಭಾರತದ ಬಳಕೆದಾರರಿಂದ 29,842 ದೂರುಗಳು ಬಂದಿದ್ದವು ಹಾಗೂ ಇವುಗಳ ಆಧಾರದಲ್ಲಿ 76,967 ವಿಷಯಗಳನ್ನು ತೆಗೆದು ಹಾಕಲಾಗಿದೆ ಎಂದು ತಿಳಿಸಿದೆ.
ಕಾಪಿರೈಟ್ ಉಲ್ಲಂಘನೆ (76,444), ಟ್ರೇಡ್‌ಮಾರ್ಕ್ ಉಲ್ಲಂಘನೆ (493), ಲೈಂಗಿಕ ವಿಷಯದ ಚಿತ್ರಗಳು (11), ಕೋರ್ಟ್ ಆದೇಶ (10) ಹಾಗೂ ಮಾನಹಾನಿ (2) ಹೀಗೆ ವಿವಿಧ ವಿಭಾಗಗಳಲ್ಲಿ ವಿಷಯಗಳನ್ನು ಗೂಗಲ್ ದೂರುಗಳ ಆಧಾರದಲ್ಲಿ ತೆಗೆದುಹಾಕಿದೆ.







