ಹರ್ಯಾಣ, ಹಿಮಾಚಲ ಉಪ ಚುನಾವಣೆಯಲ್ಲಿ ಬಿಜೆಪಿಯ ಸೋಲು ರೈತ ಚಳುವಳಿಯ ಗೆಲುವು: ರಾಕೇಶ್ ಟಿಕಾಯತ್

ಹೊಸದಿಲ್ಲಿ: ಹಿಮಾಚಲ ಪ್ರದೇಶ ಹಾಗೂ ಹರ್ಯಾಣ ಉಪ ಚುನಾವಣೆಯಲ್ಲಿ ಬಿಜೆಪಿಯ ಸೋಲಿಗೆ ಬುಧವಾರ ಪ್ರತಿಕ್ರಿಯಿಸಿರುವ ಭಾರತೀಯ ಕಿಸಾನ್ ಯೂನಿಯನ್(ಬಿಕೆಯು)ಮುಖಂಡ ರಾಕೇಶ್ ಟಿಕಾಯತ್, ಇದು ರೈತರ ಚಳುವಳಿಯ ಗೆಲುವಾಗಿದೆ ಎಂದರು.
ಎಎನ್ ಐ ಜತೆಗೆ ಮಾತನಾಡಿದ ಟಿಕಾಯತ್, "ಅವರು ಈ ದೇಶದ ಜನರನ್ನು ಹತ್ತಿಕ್ಕಲು ಬಯಸಿದ್ದರು. ಅವರ ತಂತ್ರಗಾರಿಕೆಯ ತೋಳ್ಬಲ ಹೆಚ್ಚಾಗಿತ್ತು. ಅವರು ದೇಶವನ್ನು ಮಾರಾಟ ಮಾಡಲು ಬಯಸಿದ್ದರು. ಹಣದುಬ್ಬರ ದಿನದಿಂದ ದಿನಕ್ಕೆ ಏರುತ್ತಿದೆ. ಜನರು ಈ ಸರಕಾರದಿಂದ ಬೇಸತ್ತಿದ್ದಾರೆ. ಬಿಜೆಪಿ ಹಿಮಾಚಲ ಹಾಗೂ ಹರ್ಯಾಣದಲ್ಲಿ ಸೋತಿದೆ. ಬಿಜೆಪಿಯ ಸೋಲು ನಮ್ಮ ಚಳುವಳಿಯ ಗೆಲುವು’’ ಎಂದರು.
ಹರ್ಯಾಣದ ಇಲ್ಲೆನಾಬಾದ್ ವಿಧಾನಸಭಾ ಕ್ಷೇತ್ರದಲ್ಲಿ ಭಾರತೀಯ ರಾಷ್ಟ್ರೀಯ ಲೋಕದಳ ಅಭ್ಯರ್ಥಿ ಅಭಯ್ ಸಿಂಗ್ ಚೌಟಾಲ ಗೆಲುವಿನ ಬಗ್ಗೆ ಪ್ರತಿಕ್ರಿಯಿಸಿದ ಟಿಕಾಯತ್, ಚೌಟಾಲರನ್ನು ಬೆಂಬಲಿಸುವ ಮೂಲಕ ರೈತರ ಚಳುವಳಿಗೆ ಜನರು ಸಮ್ಮತಿಯ ಮುದ್ರೆಯೊತ್ತಿದ್ದಾರೆ. ನಾವು ಮಧ್ಯಪ್ರದೇಶದಲ್ಲೂ ನಮ್ಮ ಚಳುವಳಿಯನ್ನು ಬಲಿಷ್ಟಗೊಳಿಸುತ್ತೇವೆ. ಅಲ್ಲಿ ಬಿಜೆಪಿಯು ತಂತ್ರಗಾರಿಕೆಯ ತೋಳ್ಬಲದಿಂದ ಗೆದ್ದಿದೆ ಎಂದರು.