ವಿಶ್ವಕಪ್:ಸ್ಕಾಟ್ಲೆಂಡ್ ವಿರುದ್ಧ ನ್ಯೂಝಿಲ್ಯಾಂಡ್ ಗೆ ರೋಚಕ ಜಯ
ಮಾರ್ಟಿನ್ ಗಪ್ಟಿಲ್ ಪಂದ್ಯಶ್ರೇಷ್ಠ

photo: AP
ದುಬೈ: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯ ಸೂಪರ್-12ರ ಸುತ್ತಿನ ಪಂದ್ಯದಲ್ಲಿ ನ್ಯೂಝಿಲ್ಯಾಂಡ್ ತಂಡವು ಸ್ಕಾಟ್ಲೆಂಡ್ ವಿರುದ್ದ 16 ರನ್ ಗಳ ಅಂತರದಿಂದ ರೋಚಕ ಜಯ ದಾಖಲಿಸಿದೆ.
ಬುಧವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಝಿಲ್ಯಾಂಡ್ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 172 ರನ್ ಗಳಿಸಿದೆ. ಗೆಲ್ಲಲು ಕಠಿಣ ಗುರಿ ಪಡೆದ ಸ್ಕಾಟ್ಲೆಂಡ್ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಮೈಕಲ್ ಲೀಸ್ಟ್ ಏಕಾಂಗಿ ಹೋರಾಟದ(ಔಟಾಗದೆ 42)ಹೊರತಾಗಿಯೂ 5 ವಿಕೆಟ್ ನಷ್ಟಕ್ಕೆ 156 ರನ್ ಗಳಿಸಿದೆ.
ಗ್ರೂಪ್ -2ರಲ್ಲಿ ಸ್ಕಾಟ್ಲೆಂಡ್ ಸತತ 3ನೇ ಸೋಲನುಭವಿಸಿದರೆ, ನ್ಯೂಝಿಲ್ಯಾಂಡ್ 3ನೇ ಪಂದ್ಯದಲ್ಲಿ 2ನೇ ಗೆಲುವು ದಾಖಲಿಸಿ ಸೆಮಿ ಫೈನಲ್ ತಲುಪುವ ವಿಶ್ವಾಸದಲ್ಲಿದೆ.
ಕಿವೀಸ್ ಪರ ಟ್ರೆಂಟ್ ಬೌಲ್ಟ್ (2-29), ಐಶ್ ಸೋಧಿ(2-42)ತಲಾ ಎರಡು ವಿಕೆಟ್ ಪಡೆದರು.
ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡಿದ್ದ ನ್ಯೂಝಿಲ್ಯಾಂಡ್ ಆರಂಭಿಕ ಬ್ಯಾಟ್ಸ್ ಮನ್ ಮಾರ್ಟಿನ್ ಗಪ್ಟಿಲ್(93, 56 ಎಸೆತ, 6 ಬೌಂಡರಿ, 7 ಸಿಕ್ಸರ್)ಭರ್ಜರಿ ಅರ್ಧಶತಕದ ಸಹಾಯದಿಂದ 5 ವಿಕೆಟ್ ನಷ್ಟಕ್ಕೆ 172 ರನ್ ಕಲೆ ಹಾಕಿತು. ಗಪ್ಟಿಲ್ 'ಪಂದ್ಯಶ್ರೇಷ್ಟ' ಗೌರವಕ್ಕೆ ಪಾತ್ರವಾದರು. ಗ್ಲೆನ್ ಫಿಲಿಪ್ಸ್(33, 37 ಎಸೆತ)ಎರಡಂಕೆಯ ಸ್ಕೋರ್ ಗಳಿಸಿದರು. ನಾಯಕ ಕೇನ್ ವಿಲಿಯಮ್ಸನ್ ಖಾತೆ ತೆರೆಯದೆ ಶರೀಫ್ ಗೆ ವಿಕೆಟ್ ಒಪ್ಪಿಸಿದರು.