ಪೋಂಜಿ ಸ್ಕೀಮ್ ಪ್ರಕರಣ: ಬೆಂಗಳೂರಿನಲ್ಲಿ 35.70 ಕೋಟಿ ಮೌಲ್ಯದ ಆಸ್ತಿ ಜಪ್ತಿ

ಬೆಂಗಳೂರು, ನ.3: ನಗರದ ಪೋಂಜಿ ಸ್ಕೀಮ್ ಪ್ರಕರಣ ಸಂಬಂಧ ಅಕ್ರಮ ಹಣ ವರ್ಗಾವಣೆ ತಡೆ ಕಾನೂನಿನಡಿ 35.70 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಲಾಗಿದೆ ಎಂದು ಜಾರಿ ನಿರ್ದೇಶನಾಲಯ (ಈಡಿ) ಮೂಲಗಳು ತಿಳಿಸಿವೆ.
ವಿಕ್ರಂ ಇನ್ವೆಸ್ಟ್‍ಮೆಂಟ್ಸ್ ಮತ್ತು ಅಸೋಸಿಯೇಟ್ಸ್ ಹೆಸರಿನ ಆಸ್ತಿ, ಬ್ಯಾಂಕ್ ದಾಖಲೆಗಳು, ಸ್ಥಿರ ಠೇವಣಿಯ 1.49 ಕೋಟಿ ರೂ., ಸೇರಿದಂತೆ ಇನ್ನಿತರೆ ಆಸ್ತಿಗಳನ್ನು ವಶಕ್ಕೆ ಪಡೆಯಲು ತಾತ್ಕಾಲಿಕ ಆದೇಶ ಹೊರಡಿಸಲಾಗಿದೆ.
ವಿಕ್ರಂ ಇನ್ವೆಸ್ಟ್ ಮೆಂಟ್‍ನ ಪಾಲುದಾರರು ಮತ್ತು ಇತರ ಸಹಚರರಾದ ರಾಘವೇಂದ್ರ ಶ್ರೀನಾಥ್, ಕೆ.ಪಿ.ನರಸಿಂಹಮೂರ್ತಿ, ಎಂ.ಪ್ರಹ್ಲಾದ, ಕೆ.ಸಿ. ನಾಗರಾಜ್ ಮತ್ತು ಸೂತ್ರಂ ಸುರೇಶ್ ಅವರು ಸರಕು ವ್ಯಾಪಾರದ ನೆಪದಲ್ಲಿ ಹೆಚ್ಚಿನ ಆದಾಯದ ಭರವಸೆ ನೀಡಿ ವಿಕ್ರಂ ಇನ್ವೆಸ್ಟ್‍ಮೆಂಟ್‍ನಲ್ಲಿ ಹೂಡಿಕೆ ಮಾಡುವಂತೆ ಸಾರ್ವಜನಿಕರಿಗೆ ಆಮಿಷವೊಡ್ಡಿ ವಂಚಿಸಿದ್ದಾರೆ ಎಂದು ನಗರ ಪೊಲೀಸರು 2018ನೆ ಸಾಲಿನಲ್ಲಿ ದಾಖಿಲಿಸಿದ್ದ ಎಫ್‍ಐಆರ್ ಆಧಾರದ ಮೇಲೆ ಅಕ್ರಮ ಹಣ ವರ್ಗಾವಣೆ ಆರೋಪದಡಿ ಈಡಿ ಪ್ರಕರಣವನ್ನು ದಾಖಲಿಸಿತ್ತು.
ಈ ಸಂಸ್ಥೆಯು ಭಾರತೀಯ ರಿಸರ್ವ್ ಬ್ಯಾಂಕ್ ಸೇರಿದಂತೆ ಯಾವುದೇ ನಿಯಂತ್ರಕ ಏಜೆನ್ಸಿಗಳಲ್ಲಿ ನೋಂದಾಯಿಸಲ್ಪಟ್ಟಿಲ್ಲ. ಗ್ರಾಹಕರಿಗೆ ನೀಡಿದ್ದ ಭರವಸೆಯಂತೆ ತಮ್ಮ ಮೊದಲ ಕಂತನ್ನು ವಾಪಸ್ ನೀಡಿದ್ದಾರೆ. ಬಳಿಕ ಗ್ರಾಹಕರ ನಂಬಿಕೆಯನ್ನು ಗಳಿಸಿ ಅವರು ಇನ್ನಷ್ಟು ಹೂಡಿಕೆ ಮಾಡಲು ಆಮಿಷವೊಡ್ಡಿದ್ದರು. ನಂತರ ಕಂಪೆನಿಯು ಅವರಿಗೆ ಅಸಲು ಮೊತ್ತವನ್ನು ಒಳಗೊಂಡಂತೆ ಹಣವನ್ನು ಹಿಂತಿರುಗಿಸುವುದನ್ನು ನಿಲ್ಲಿಸಿತ್ತು.
ಅಷ್ಟೇ ಅಲ್ಲದೆ, ಕಂಪೆನಿಯು ಎಲ್‍ಐಸಿ ಏಜೆಂಟ್‍ಗಳು ಮತ್ತು ಇತರರನ್ನು ಬಳಸಿಕೊಂಡಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ ಎಂದು ಜಾರಿನಿರ್ದೇಶನಾಲಯ ವಿವರಿಸಿದೆ.







