ಪರಿಶಿಷ್ಟರಿಗೆ ನಿವೇಶನ; ಮುಖ್ಯಮಂತ್ರಿ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನ.6ಕ್ಕೆ ಸಭೆ

ಬೆಂಗಳೂರು, ನ. 3: ಬಿಬಿಎಂಪಿ ವ್ಯಾಪ್ತಿಯಲ್ಲಿನ ಎಸ್ಸಿ-ಎಸ್ಟಿ ವರ್ಗದ ಬಡ ಕೂಲಿ ಕಾರ್ಮಿಕರಿಗೆ ನಿವೇಶನ ಕಲ್ಪಿಸಲು ಮೀಸಲಿಟ್ಟ 24 ಎಕರೆ ಭೂಮಿಯನ್ನು ಅನ್ಯ ಉದ್ದೇಶಕ್ಕೆ ಬಳಕೆ ಮಾಡದೆ, ಆ ವರ್ಗದ ಜನರಿಗೆ ವಸತಿ ಕಲ್ಪಿಸುವ ಸಂಬಂಧ ನ.6ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಸಭೆ ಕರೆಯಲಾಗಿದೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ 1,110 ಮಂದಿ ಕೂಲಿ ಕಾರ್ಮಿಕರಿಗೆ ಸ್ವಂತ ನಿವೇಶನ ನೀಡುವ ಉದ್ದೇಶಕ್ಕಾಗಿ 24 ಎಕರೆ ಭೂಮಿಯನ್ನು ಮಂಜೂರು ಮಾಡಲಾಗಿತ್ತು. ಆದರೆ, ವಸತಿ ಸಚಿವ ವಿ.ಸೋಮಣ್ಣ ಅಧಿಕಾರಿಗಳು ಮತ್ತು ಯಲಹಂಕ ಕ್ಷೇತ್ರದ ಶಾಸಕ ಎಸ್.ಆರ್.ವಿಶ್ವನಾಥ್ ವಿರೋಧಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
13 ವರ್ಷಗಳಿಂದ ಸ್ವಂತ ನಿವೇಶನಕ್ಕಾಗಿ ಪರಿಶಿಷ್ಟರು ಹೋರಾಟ ಮಾಡುತ್ತಿದ್ದು, ರಾಜ್ಯ ಸರಕಾರ ತ್ವರಿತಗತಿಯಲ್ಲಿ ಎಸ್ಸಿ-ಎಸ್ಟಿ ವರ್ಗದ ಜನರಿಗೆ ಮೀಸಲಿಟ್ಟ ಜಾಗದಲ್ಲಿ ನಿವೇಶನ ಹಂಚಿಕೆ ಮಾಡಬೇಕು. ಯಾವುದೇ ಕಾರಣಕ್ಕೂ ಅನ್ಯ ಉದ್ದೇಶಕ್ಕೆ ಆ ಭೂಮಿಯನ್ನು ಬಳಕೆ ಮಾಡಬಾರದು. ಈಗಾಗಲೇ 1,110 ಮಂದಿ ಫಲಾನುಭವಿಗಳನ್ನು ಆಯ್ಕೆ ಮಾಡಿದ್ದು, ಅದೇ ಫಲಾನುಭವಿಗಳಿಗೆ ನಿವೇಶನ ನೀಡಬೇಕು ಎಂದು ಬಹುಜನ ವಿಮೋಚನಾ ಚಳವಳಿ ಸಂಚಾಲಕ ಎಸ್.ಗಂಗಾಧರ್ ಆಗ್ರಹಿಸಿದ್ದಾರೆ.





