ಶಿವಮೊಗ್ಗ: ಗಾಂಜಾ ಆರೋಪಿಗೆ ಪರಾರಿಯಾಗಲು ಸಹಕರಿಸಿದ ಆರೋಪ; ಪೇದೆ ಅಮಾನತು

ಶಿವಮೊಗ್ಗ: ಜಿಲ್ಲೆಯಲ್ಲಿ ಗಾಂಜಾ ಹಾವಳಿ ಹೆಚ್ಚಲು ಪರೋಕ್ಷವಾಗಿ ಕೆಲ ಪೊಲೀಸ್ ಸಿಬ್ಬಂದಿ ಸಹಕಾರ ನೀಡುತ್ತಿದ್ದಾರೆ ಎಂಬ ಆರೋಪಕ್ಕೆ ಪುಷ್ಠಿ ನೀಡುವಂತ ಘಟನೆ ಬೆಳಕಿಗೆ ಬಂದಿದ್ದು, ಇದೇ ಕಾರಣಕ್ಕೆ ಭದ್ರಾವತಿ ನ್ಯೂಟೌನ್ ಠಾಣೆ ಮುಖ್ಯಪೇದೆ ಅಶೋಕ್ ಅಮಾನತು ಶಿಕ್ಷೆಗೆ ಗುರಿಯಾಗಿದ್ದಾರೆ.
ಗಾಂಜಾ ಪೆಡ್ಲರ್ ಭದ್ರಾವತಿ ಕೂಲಿ ಬ್ಲಾಕ್ ಶೆಡ್‌ನ ಮಧು ಪೊಲೀಸರಿಂದ ತಪ್ಪಿಸಿಕೊಳ್ಳಲು ನೆರವಾದ ಆರೋಪ ಅಶೋಕ್ ಮೇಲಿದೆ. ಆರೋಪಿ ಮಧು ಎಸ್ಪಿ ಎದುರು ಈ ವಿಷಯವನ್ನು ಒಪ್ಪಿಕೊಂಡಿದ್ದು, ಅಶೋಕ್ ಅಮಾನತು ಮಾಡಿ ಎಸ್ಪಿ ಲಕ್ಷ್ಮೀಪ್ರಸಾದ್ ಆದೇಶ ಮಾಡಿದ್ದಾರೆ.
ಮಧು ಆಂಧ್ರಪ್ರದೇಶದಿಂದ ಏಕಕಾಲಕ್ಕೆ ಒಂದು ಕ್ವಿಂಟಾಲ್‌ವರೆಗೂ ಗಾಂಜಾ ತರಿಸಿ ಭದ್ರಾವತಿ, ಶಿವಮೊಗ್ಗದಲ್ಲಿ ಪೆಡ್ಲರ್‌ಗಳಿಗೆ ಹಂಚಿಕೆ ಮಾಡುತ್ತಿದ್ದ. ಇದೇ ವರ್ಷ ಜೂನ್ ೨೮ರಂದು ತರೀಕೆರೆ ರಸ್ತೆ ಬಳಿ ಖಚಿತ ಮಾಹಿತಿ ಮೇರೆಗೆ ತಪಾಸಣೆ ನಡೆಸಿದ ಪೊಲೀಸರಿಗೆ ಕಾರಿನಲ್ಲಿ ೪೮ ಕೆಜಿ ಗಾಂಜಾ ಪತ್ತೆಯಾಗಿತ್ತು. ಈ ವೇಳೆ ಬಂಧನಕ್ಕೊಳಗಾದ ಕಾರು ಚಾಲಕ ಮುರುಗನ್, ಈ ಗಾಂಜಾ ಮಧುಗೆ ಸೇರಿದ್ದು ಎಂಬ ಮಾಹಿತಿ ನೀಡಿದ್ದ. ಮಧು ಮನೆ ಮೇಲೆ ಪೊಲೀಸರು ದಾಳಿ ನಡೆಸಿದಾಗ ಕೆಜಿಗಟ್ಟಲೇ ಗಾಂಜಾ ಪತ್ತೆಯಾಗಿದ್ದು ಆರೋಪಿಯನ್ನು ಬಂಧಿಸಿ ಠಾಣೆಗೆ ಕರೆತರುವಾಗ ಪರಾರಿಯಾಗಿದ್ದ. ಆರೋಪಿ ಪರಾರಿಯಾಗಲು ಮುಖ್ಯ ಪೇದೆ ಅಶೋಕ್ ಸಹಕಾರ ನೀಡಿದ್ದರು ಎನ್ನಲಾಗಿದೆ. ಬಳಿಕ ಆತನನ್ನು ಬಂಧಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಈ ಘಟನೆ ಸಾರ್ವಜನಿಕವಾಗಿ ಚರ್ಚೆಗೆ ಕಾರಣವಾಗಿತ್ತು.
ಮಧು ವಿಚಾರಣೆ ಮಾಡಿದ ಎಸ್ಪಿ
ಇಡೀ ಪ್ರಕರಣದ ಬಗ್ಗೆ ನಿಖರ ಮಾಹಿತಿ ಪಡೆಯಲು ಬಂಧನದಲ್ಲಿದ್ದ ಆರೋಪಿ ಮಧುವನ್ನು ಎಸ್ಪಿ ಬಿ.ಎಂ.ಲಕ್ಷ್ಮೀಪ್ರಸಾದ್ ವಿಚಾರಣೆ ಮಾಡಿದಾಗ ಸತ್ಯಾಂಶ ಹೊರಬಿದ್ದಿದೆ.ನಾನು ತಪ್ಪಿಸಿಕೊಳ್ಳಲು ಅಶೋಕ್ ಸಹಕಾರ ನೀಡಿದ್ದಾಗಿ ಮಧು ಒಪ್ಪಿಕೊಂಡಿದ್ದಾನೆ. ಸಿಬ್ಬಂದಿಯ ಕಳ್ಳಾಟಕ್ಕೆ ಗರಂ ಆಗಿರುವ ಎಸ್ಪಿ ಬಿ.ಎಂ. ಲಕ್ಷ್ಮೀಪ್ರಸಾದ್ ಅಶೋಕ್‌ನನ್ನು ಅಮಾನತುಗೊಳಿಸಿದ್ದಾರೆ.







