ಮಧ್ಯಪ್ರಾಚ್ಯ ಬಿಕ್ಕಟ್ಟು ನಿವಾರಣೆಗೆ ಭಾರತ ಪಾತ್ರ ವಹಿಸಬೇಕು: ಫೆಲೆಸ್ತೀನ್

photo:ANI
ರಮಲ್ಲಾ,ನ.3: ಅಂತಾರಾಷ್ಟ್ರೀಯ ರಾಜಕಾರಣದಲ್ಲಿ ಭಾರತದ ಪ್ರಭಾವ ಹೆಚ್ಚುತ್ತಿರುವುದನ್ನು ಒಪ್ಪಿಕೊಂಡಿರುವ ಫೆಲೆಸ್ತೀನ್ ಪ್ರಧಾನಿ ಡಾ. ಮೊಹಮ್ಮದ್ ಶತಾಯೆಹ್ ಅವರು, ಮಧ್ಯಪ್ರಾಚ್ಯ ಬಿಕ್ಕಟ್ಟನ್ನು ಪರಿಹಾರ ಕಂಡುಹಿಡಿಯುವಲ್ಲಿ ಹೊಸದಿಲ್ಲಿಯು ಸುಸ್ಥಾಪಿತವಾದ ಹಾಗೂ ಉತ್ಕೃಷ್ಟವಾದ ಪಾತ್ರವನ್ನು ವಹಿಸಬೇಕೆಂದು ಕರೆ ನೀಡಿದ್ದಾರೆ.
ಗ್ಲಾಸ್ಗೋದಲ್ಲಿ ಇತ್ತೀಚೆಗೆ ನಡೆದ ಸಿಓಪಿ 26 ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಜತೆ ಮಾತುಕತೆ ನಡೆಸಿದ ಡಾ. ಮೊಹಮ್ಮದ್ ಶತಾಯೆಹ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ವೇಳೆ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆಂದು ಫೆಲೆಸ್ತೀನ್ ಪ್ರಧಾನಿ ಕಾರ್ಯಾಲಯವು ಬುಧವಾರ ಬಿಡುಗಡೆಗೊಳಿಸಿದ ಹೇಳಿಕೆಯಲ್ಲಿ ತಿಳಿಸಿದೆ.
ಮಧ್ಯಪ್ರಾಚ್ಯದಲ್ಲಿನ ನೂತನ ರಾಜಕೀಯ ಬೆಳವಣಿಗೆಗಳ ಬಗ್ಗೆ ಫೆಲೆಸ್ತೀನ್ ಪ್ರಧಾನಿಯವರು, ನರೇಂದ್ರ ಮೋದಿಯವರಿಗೆ ವಿವರಿಸಿದರು ಹಾಗೂ ಫೆಲೆಸ್ತೀನ್ ಹಾಗೂ ಭಾರತ ನಡುವೆ ದ್ವಿಪಕ್ಷೀಯ ಬಾಂಧವ್ಯಗಳನ್ನು ವೃದ್ಧಿಸುವ ಹಾಗೂ ಬಲಪಡಿಸುವ ಮಾರ್ಗೋಪಾಯಗಳ ಬಗ್ಗೆ ಚರ್ಚಿಸಿದರೆಂದು ಹೇಳಿಕೆಯು ತಿಳಿಸಿದೆ.
ಅಂತಾರ್ರಾಷ್ಟ್ರೀಯ ರಾಜಕಾರಣದಲ್ಲಿ ತನ್ನ ಬಲವನ್ನು ಹೆಚ್ಚಿಸಿಕೊಳ್ಳುತ್ತಿರುವ ಭಾರತದ ಜೊತೆಗಿನ ಬಾಂಧವ್ಯಕ್ಕೆ ಫೆಲೆಸ್ತೀನ್ ಅಪಾರವಾದ ಮಹತ್ವವನ್ನು ನೀಡುತ್ತಿದೆ ಎಂದು ಡಾ. ಮೊಹಮ್ಮದ್ ಶತಾಯೆಹ್ ಅವರು ಭಾರತದ ಪ್ರಧಾನಿಯವರಿಗೆ ತಿಳಿಸಿದ್ದಾರೆಂದು ಹೇಳಿಕೆ ವಿವರಿಸಿದೆ.
ಮಧ್ಯಪ್ರಾಚ್ಯ ಹಾಗೂ ಪಶ್ಚಿಮ ಏಶ್ಯದಲ್ಲಿ ಭದ್ರತೆ ಹಾಗೂ ಸ್ಥಿರತೆಯನ್ನು ಸಾಧಿಸಲು ಸಂಬಂಧಿತ ಪಕ್ಷಗಳ ನಡುವೆ ಸಹಕಾರವನ್ನು ಏರ್ಪಡಿಸಲು ವಿಶ್ವ ಸಂಸ್ಥೆಯ ಭದ್ರತಾ ಮಂಡಳಿ ಹಾಗೂ ಮಾನವಹಕ್ಕುಗಳ ಮಂಡಳಿಯಂತಹ ಅಂತಾರಾಷ್ಟ್ರೀಯ ಸಂಸ್ಥೆಗಳಲ್ಲಿ ಭಾರತದ ಪಾತ್ರವು ಬಹುಮುಖ್ಯವಾದುದಾಗಿದೆ ಎಂದು ಫೆಲೆಸ್ತೀನ್ ಪ್ರಧಾನಿ ಮಾತುಕತೆ ವೇಳೆ ತಿಳಿಸಿದ್ದರು.
ಫೆಲೆಸ್ತೀನ್ ಜನತೆಗೆ ಭಾರತವು ಉದಾರವಾಗಿ ಆರ್ಥಿಕ ಹಾಗೂ ತಂತ್ರಜ್ಞಾ ನೆರವನ್ನು ನೀಡುತ್ತಿರುವ ಬಗ್ಗೆಯೂ ಪ್ರಧಾನಿ ಶತಾಯೆಹ್ ಅವರು ಶ್ಲಾಘಿಸಿದರೆಂದು ಹೇಳಿಕೆಯು ತಿಳಿಸಿದೆ. ಕಳೆದ ವರ್ಷ ಭಾರತವು ಫೆಲೆಸ್ತೀನಿ ನಿರಾಶ್ರಿತರಿಗಾಗಿನ ವಿಶ್ವಸಂಸ್ಥೆಯ ಪರಿಹಾರ ಕಾರ್ಯಸಂಸ್ಥೆಗೆ 2 ದಶಲಕ್ಷ ಡಾಲರ್ ಧನಸಹಾಯ ನೀಡಿತ್ತು. ಅಲ್ಲದೆ ಭಾರತ-ಫೆಲೆಸ್ತೀನ್ ಅಭಿವೃದ್ಧಿ ಪಾಲುದಾರಿಕೆ ಯೋಜನೆಯಡಿ ಕಳೆದ 5 ವರ್ಷಗಳಿಂದ ಕೃಷಿ, ಆರೋಗ್ಯಪಾಲನೆ, ಮಾಹಿತಿ ತಂತ್ರಜ್ಞಾನ, ಯುವಜನ ವ್ಯವಹಾರ, ಕಾನ್ಸುಲರ್ ವ್ಯವಹಾರ, ಮಹಿಳಾ ಸಬಲೀಕರಣ ಹಾಗೂ ಮಾಧ್ಯಮ ಕ್ಷೇತ್ರದಲ್ಲಿ ವಿವಿಧ ಒಪ್ಪಂದಗಳಿಗೆ ಸಹಿಹಾಕಲಾಗಿತ್ತು.







