ಪಾಕ್ನ 6 ಮಹಿಳಾ ಕ್ರಿಕೆಟಿಗರಿಗೆ ಕೊರೋನ ಸೋಂಕು

photo:twitter
ಕರಾಚಿ, ನ. 3: ವೆಸ್ಟ್ಇಂಡೀಸ್ ವಿರುದ್ಧದ ಸ್ವದೇಶಿ ಸರಣಿಯ ಆರಂಭಕ್ಕೆ ಮುನ್ನ ಪಾಕಿಸ್ತಾನದ ಆರು ಮಹಿಳಾ ಕ್ರಿಕೆಟಿಗರು ಕೊರೋನ ವೈರಸ್ ಸೋಂಕಿಗೆ ಒಳಗಾಗಿದ್ದಾರೆ. ಹಾಗಾಗಿ, ಸರಣಿಯಲ್ಲಿ ಸರಿಯಾದ ತಂಡವನ್ನು ಇಳಿಸುವ ಬಗ್ಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಚಿಂತೆಗೊಳಗಾಗಿದೆ.
ಮೊದಲು ಮೂವರು ಕ್ರಿಕೆಟಿಗರು ಮತ್ತು ಈಗ ಇನ್ನೂ ಮೂವರು ಕ್ರಿಕೆಟಿಗರು ಸೋಂಕಿಗೆ ಒಳಗಾಗಿದ್ದಾರೆ. ಮೊದಲು ಸೋಂಕಿಗೆ ಒಳಗಾದವರು ಕರಾಚಿಯಲ್ಲಿ ಸ್ಥಾಪಿಸಲಾಗಿರುವ ಶಿಬಿರದಲ್ಲಿ ಕ್ವಾರಂಟೈನ್ನಲ್ಲಿದ್ದಾರೆ.
ಸರಣಿಗಾಗಿ ಆಯ್ಕೆ ಮಾಡಲಾಗಿರುವ 18 ಆಟಗಾರರ ಪೈಕಿ 12 ಮಂದಿ ಕರಾಚಿಯ ನ್ಯಾಶನಲ್ ಸ್ಟೇಡಿಯಮ್ನಲ್ಲಿ ತರಬೇತಿ ಪಡೆಯುತ್ತಿದ್ದಾರೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧಿಕಾರಿಯೊಬ್ಬರು ತಿಳಿಸಿದರು. ಮೊದಲ ಏಕದಿನ ಪಂದ್ಯವು ಇದೇ ಸ್ಟೇಡಿಯಮ್ನಲ್ಲಿ ನವೆಂಬರ್ 8ರಂದು ನಡೆಯಲಿದೆ.
ಸ್ಟೀಫನೀ ಟೇಲರ್ ನೇತೃತ್ವದ ವೆಸ್ಟ್ಇಂಡೀಸ್ ಮಹಿಳಾ ತಂಡವು ಈಗಾಗಲೇ ಕರಾಚಿ ತಲುಪಿದೆ. ಈಗ ತಂಡದ ಸದಸ್ಯೆಯರು ಹೊಟೇಲ್ನಲ್ಲಿ ಮೂರು ದಿನಗಳ ಕ್ವಾರಂಟೈನ್ನಲ್ಲಿದ್ದಾರೆ. ಶುಕ್ರವಾರದಿಂದ ಅವರು ಅಭ್ಯಾಸ ನಡೆಸುತ್ತಾರೆ. ಪಾಕಿಸ್ತಾನ ಮತ್ತು ವೆಸ್ಟ್ಇಂಡೀಸ್ ತಂಡಗಳು ಕರಾಚಿಯಲ್ಲಿ ಮೂರು ಏಕದಿನ ಪಂದ್ಯಗಳನ್ನು ಆಡಲಿವೆ.





