ಜಾಗತಿಕ ಹೊಗೆಯುಗುಳುವಿಕೆ ದಾಖಲೆ ಮಟ್ಟದ ಸನಿಹಕ್ಕೆ: ವರದಿ

ಸಾಂದರ್ಭಿಕ ಚಿತ್ರ (source: PTI)
ಗ್ಲಾಸ್ಗೊ, ನ.4: ಜಾಗತಿಕವಾಗಿ ಇಂಗಾಲದ ಡೈ ಆಕ್ಸೈಡ್ ಹೊರಸೂಸುವಿಕೆ ಪ್ರಮಾಣ 2021ರಲ್ಲಿ ಕೋವಿಡ್ ಪೂರ್ವಮಟ್ಟಕ್ಕೆ ಹೆಚ್ಚಿದೆ. ಇದಕ್ಕೆ ಬಹುತೇಕ ದಹಿಸುವ ಇಂಧನ ಕಾರಣವಾಗಿದ್ದು, ಒಟ್ಟು ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆ ಪೈಕಿ ಚೀನಾದ ಪಾಲು ಮೂರನೇ ಒಂದರಷ್ಟಾಗಿದೆ ಎಂದು ಗುರುವಾರ ಪ್ರಕಟಿಸಲಾದ ವರದಿಯಿಂದ ತಿಳಿದು ಬಂದಿದೆ.
ಒಟ್ಟಾರೆಯಾಗಿ ಈ ವರ್ಷ ಇಂಗಾಲದ ಡೈ ಆಕ್ಸೈಡ್ ಮಾಲಿನ್ಯ 2019ರ ಮಟ್ಟದ ಸನಿಹಕ್ಕೆ ಬಂದಿದೆ ಎಂದು ಜಾಗತಿಕ ಇಂಗಾಲ ಯೋಜನೆ ಒಕ್ಕೂಟದ ವರದಿ ಹೇಳಿದೆ. ಸುಮಾರು 200 ದೇಶಗಳು ಸಿಓಪಿ26 ಹವಾಮಾನ ಶೃಂಗದಲ್ಲಿ ಜಾಗತಿಕ ತಾಪಮಾನದ ಬಗ್ಗೆ ಚರ್ಚಿಸುತ್ತಿರುವ ಸಂದರ್ಭದಲ್ಲೇ ಈ ವರದಿ ಬಿಡುಗಡೆ ಮಾಡಲಾಗಿದೆ.
ಅನಿಲ ಮತ್ತು ಅತ್ಯಧಿಕ ಮಾಲಿನ್ಯಕಾರಕ ಕಲ್ಲಿದ್ದಲಿನಿಂದ ಹೊರಸೂಸುವ ಇಂಗಾಲದ ಡೈ ಆಕ್ಸೈಡ್ ಪ್ರಮಾಣ ಈ ವರ್ಷ, ಕಳೆದ ವರ್ಷ ಕೋವಿಡ್ ಸಂಬಂಧಿ ಆರ್ಥಿಕ ಹಿಂಜರಿತದಿಂದಾಗಿ ಇಳಿಕೆಯಾದ ಪ್ರಮಾಣಕ್ಕಿಂತ ಅಧಿಕವಾಗಿ ಹೆಚ್ಚಿದೆ.
ಪ್ಯಾರೀಸ್ ಒಪ್ಪಂದದ ಪ್ರಕಾರ ಕೈಗಾರಿಕಾ ಪೂರ್ವಮಟ್ಟದಿಂದ ಜಾಗತಿಕ ತಾಪಮಾನದ ಏರಿಕೆಯನ್ನು 1.5 ಡಿಗ್ರಿ ಸೆಲ್ಸಿಯಸ್ನಷ್ಟಕ್ಕೆ ಸೀಮಿತಗೊಳಿಸಿದರೆ ಮಾತ್ರ ಸಾವಿನ ಪ್ರಮಾಣ ಮತ್ತು ಹಾನಿಯನ್ನು ತಡೆಯಬಹುದಾಗಿದೆ. ಆದರೆ ಇದಕ್ಕಾಗಿ 2030ರ ವೇಳೆಗೆ ಇಂಗಾಲದ ಡೈ ಆಕ್ಸೈಡ್ ಹೊರಸೂಸುವಿಕೆಯನ್ನು ಅರ್ಧಕ್ಕೆ ಇಳಿಸಬೇಕಾಗಿದೆ ಹಾಗೂ 2050ರ ವೇಳೆಗೆ ಶೂನ್ಯಕ್ಕೆ ಇಳಿಸಬೇಕಾಗಿದೆ.
'ಈ ವರದಿ ರಿಯಾಲಿಟಿ ಚೆಕ್' ಆಗಿದೆ ಎಂದು ಬ್ರಿಟನ್ನ ಈಸ್ಟ್ ಅಂಗ್ಲಿಯಾ ವಿವಿಯ ಹವಾಮಾನ ಬದಲಾವಣೆ ವಿಜ್ಞಾನದ ಪ್ರೊಫೆಸರ್ ಮತ್ತು ಅಧ್ಯಯನ ನಡೆಸಿದ ಕೊರೈನ್ ಲೇ ಕ್ವೇರ್ ಹೇಳಿದ್ದಾರೆ. ಗ್ಲಾಸ್ಗೊದಲ್ಲಿ ಹವಾಮಾನ ಬದಲಾವಣೆಯನ್ನು ನಿಭಾಯಿಸುವ ಚರ್ಚೆ ನಡೆಯುತ್ತಿರುವಾಗ ವಾಸ್ತವ ಜಗತ್ತಿನಲ್ಲಿ ಏನು ನಡೆಯುತ್ತಿದೆ ಎನ್ನುವುದು ಇದರಿಂದ ತಿಳಿದುಬರುತ್ತಿದೆ ಎಂದು ವಿವರಿಸಿದ್ದಾರೆ.