ʼಸಾರ್ವಜನಿಕ ಆಸ್ತಿಗಳಿಗೆ ಹಾನಿಯಾದರೆ ಪ್ರತಿಭಟನಾಕಾರರಿಂದ ವಸೂಲಿʼ ಕಾಯ್ದೆ ಜಾರಿ: ಮ.ಪ್ರ ಗೃಹಸಚಿವ ಹೇಳಿಕೆ

ಭೋಪಾಲ: ಮಧ್ಯಪ್ರದೇಶ ಸರ್ಕಾರವು ಪ್ರತಿಭಟನಾಕಾರರಿಂದ ಸಾರ್ವಜನಿಕ ಮತ್ತು ಖಾಸಗಿ ಆಸ್ತಿಗಳಿಗೆ ನಡೆಸಿದ ಹಾನಿಯನ್ನು ವಸೂಲಿ ಮಾಡಲು ಕಾನೂನನ್ನು ತರಲಿದೆ ಎಂದು ರಾಜ್ಯದ ಗೃಹ ಸಚಿವ ನರೋತ್ತಮ್ ಮಿಶ್ರಾ ಬುಧವಾರ ಹೇಳಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಉತ್ತರ ಪ್ರದೇಶ ಮತ್ತು ಹರಿಯಾಣದ ನಂತರ ಇಂತಹ ಕಾನೂನನ್ನು ಪರಿಚಯಿಸಿದ ಮೂರನೇ ರಾಜ್ಯ ಮಧ್ಯಪ್ರದೇಶವಾಗಲಿದೆ.
ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನಾಕಾರರಿಂದ ಹಾನಿಯನ್ನು ವಸೂಲಿ ಮಾಡಲು ಉತ್ತರ ಪ್ರದೇಶ ಮಾರ್ಚ್ 2020 ರಲ್ಲಿ ಸುಗ್ರೀವಾಜ್ಞೆಗೆ ಅನುಮೋದನೆ ನೀಡಿತ್ತು. ಮೂರು ಕೃಷಿ ಕಾನೂನುಗಳ ವಿರುದ್ಧ ರೈತರ ಪ್ರತಿಭಟನೆಯ ನಡುವೆ ಹರಿಯಾಣ ಈ ವರ್ಷದ ಮಾರ್ಚ್‌ನಲ್ಲಿ ಹಾನಿಯ ವಸೂಲಾತಿ ಮಸೂದೆಯನ್ನು ಅಂಗೀಕರಿಸಿದೆ.
"ಕಲ್ಲು ತೂರಾಟ ಮತ್ತು ಗಲಭೆಗಳಂತಹ ಘಟನೆಗಳ ಸಂದರ್ಭದಲ್ಲಿ ಸಾರ್ವಜನಿಕ ಮತ್ತು ವೈಯಕ್ತಿಕ ವ್ಯಕ್ತಿಗಳ ಆಸ್ತಿಯನ್ನು ಹಾನಿ ಮಾಡುವವರನ್ನು ತಡೆಯುವ ಸಲುವಾಗಿ ಸರ್ಕಾರವು ಖಾಸಗಿ ಮತ್ತು ಸಾರ್ವಜನಿಕ ಆಸ್ತಿ ಹಾನಿ ಮತ್ತು ವಸೂಲಾತಿ ತಡೆ ಕಾಯ್ದೆಯನ್ನು ತರಲು ಹೊರಟಿದೆ." ಎಂದು ನರೋತ್ತಮ್ ಮಿಶ್ರಾ ಹೇಳಿಕೆ ನೀಡಿದ್ದಾರೆ.
ನವೆಂಬರ್ ಅಂತ್ಯದಲ್ಲಿ ಮಧ್ಯಪ್ರದೇಶ ವಿಧಾನಸಭೆಯ ಚಳಿಗಾಲದ ಅಧಿವೇಶನದಲ್ಲಿ ಮಸೂದೆಯನ್ನು ಚರ್ಚಿಸುವ ಸಾಧ್ಯತೆಯಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.