ತ್ರಿಪುರಾ ಹಿಂಸಾಚಾರ: ಸತ್ಯಶೋಧನಾ ತಂಡದ ಇಬ್ಬರ ವಿರುದ್ಧ ಅಕ್ರಮ ಚಟುವಟಿಕೆಗಳ ನಿಯಂತ್ರಣ ಕಾಯಿದೆ ಹೇರಿದ ಪೊಲೀಸರು

ಹೊಸದಿಲ್ಲಿ,ನ.4: ಕಳೆದ ತಿಂಗಳು ರಾಜ್ಯದಲ್ಲಿ ನಡೆದಿದ್ದ ಕೋಮು ಹಿಂಸಾಚಾರದ ಬಗ್ಗೆ ತನಿಖೆಗಾಗಿ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದ ಸತ್ಯಶೋಧನಾ ತಂಡದ ಭಾಗವಾಗಿದ್ದ ಇಬ್ಬರು ವಕೀಲರಿಗೆ ತ್ರಿಪುರಾ ಪೊಲೀಸರು ಬುಧವಾರ ಅಕ್ರಮ ಚಟುವಟಿಕೆಗಳ (ತಡೆ) ಕಾಯ್ದೆ (ಯುಎಪಿಎ)ಯಡಿ ನೋಟಿಸ್‌ಗಳನ್ನು ಕಳುಹಿಸಿದ್ದಾರೆ.
ಹಿಂಸಾಚಾರದ ಸಂದರ್ಭದಲ್ಲಿ ಕನಿಷ್ಠ 12 ಮಸೀದಿಗಳು,ಮುಸ್ಲಿಮರಿಗೆ ಸೇರಿದ ಒಂಭತ್ತು ಅಂಗಡಿಗಳು ಮತ್ತು ಮೂರು ಮನೆಗಳನ್ನು ಗುರಿಯಾಗಿಸಿಕೊಳ್ಳಲಾಗಿತ್ತು ಎಂದು ಮಂಗಳವಾರ ಬಿಡುಗಡೆಗೊಳಿಸಿದ್ದ ವರದಿಯಲ್ಲಿ ಪಿಯುಸಿಎಲ್ ಪರ ದಿಲ್ಲಿಯ ವಕೀಲ ಮುಕೇಶ ಮತ್ತು ಮಾನವ ಹಕ್ಕುಗಳ ರಾಷ್ಟ್ರೀಯ ಒಕ್ಕೂಟದ ವಕೀಲ ಅನ್ಸಾರ್ ಇಂದೋರಿ ಹೇಳಿದ್ದರು.
ಪೊಲೀಸರು ಈ ವಕೀಲರ ವಿರುದ್ಧ ಐಪಿಸಿಯ ವಿವಿಧ ಕಲಮ್‌ಗಳಡಿ ಆರೋಪಗಳನ್ನು ಹೊರಿಸಿದ್ದಾರೆ.
ಕಳೆದ ತಿಂಗಳು ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲೆ ದಾಳಿಗಳ ಬಳಿಕ ವಿಹಿಂಪ ಅ.26ರಂದು ತ್ರಿಪುರಾದಲ್ಲಿ ಪ್ರತಿಭಟನಾ ರ್ಯಾಲಿಯನ್ನು ನಡೆಸಿತ್ತು. ಈ ಸಂದರ್ಭ ಹಿಂಸಾಚಾರ ಮತ್ತು ಮಸೀದಿಗಳು,ಮುಸ್ಲಿಮರ ಅಂಗಡಿಗಳು ಮತ್ತು ಮನೆಗಳ ಮೇಲೆ ದಾಳಿಗಳು ನಡೆದಿದ್ದವು. ಆದರೆ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸ್ಥಿತಿ ಅತ್ಯಂತ ಸಹಜವಾಗಿದೆ ಎಂದು ಪದೇ ಪದೇ ಹೇಳಿಕೊಂಡಿದ್ದ ಪೊಲೀಸರು,ಯಾವುದೇ ಮಸೀದಿಗೆ ಬೆಂಕಿ ಹಚ್ಚಲಾಗಿಲ್ಲ ಎಂದು ಪ್ರತಿಪಾದಿಸಿದ್ದರು.
ಆಡಳಿತ,ತೀವ್ರವಾದಿ ಸಂಘಟನೆಗಳ ಹೊಣೆಗೇಡಿತನ ಮತ್ತು ರಾಜಕಾರಣಿಗಳ ಪಟ್ಟಭದ್ರ ಹಿತಾಸಕ್ತಿಗಳು ಹಿಂಸೆಗೆ ಕಾರಣವಾಗಿದ್ದವು ಎಂದು ಸತ್ಯಶೋಧನಾ ಸಮಿತಿಯ ವರದಿಯು ತಿಳಿಸಿದೆ. ಸರ್ವೋಚ್ಚ ನ್ಯಾಯಾಲಯದ ವಕೀಲರಾದ ಎಹ್ತೆಶಾಮ್ ಹಾಶ್ಮಿ ಮತ್ತು ಅಮಿತ್ ಶ್ರೀವಾಸ್ತವ ಅವರು ವರದಿಯ ಸಹಲೇಖಕರಾಗಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಮಾಡಿಕೊಂಡಿರುವ ಕಪೋಲಕಲ್ಪಿತ ಮತ್ತು ಸುಳ್ಳು ಹೇಳಿಕೆಗಳು/ಟೀಕೆಗಳನ್ನು ತಕ್ಷಣವೇ ಅಳಿಸುವಂತೆ ಮುಕೇಶ ಮತ್ತು ಇಂದೋರಿಯವರಿಗೆ ಕಳುಹಿಸಿರುವ ನೋಟಿಸ್‌ನಲ್ಲಿ ಸೂಚಿಸಲಾಗಿದೆ. ನ.10ರಂದು ಪಶ್ಚಿಮ ಅಗರ್ತಲಾ ಪೊಲೀಸ್ ಠಾಣೆಯಲ್ಲಿ ಹಾಜರಾಗುವಂತೆಯೂ ಅವರಿಗೆ ನಿರ್ದೇಶ ನೀಡಲಾಗಿದೆ.
‘ನಾವು ನೋಡಿದ್ದನ್ನು ಮಾತ್ರ ನಾನು ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಮಾಡಿಕೊಂಡಿದ್ದೆ. ವರದಿಯ ಬಿಡುಗಡೆ ಸಂದರ್ಭ ದಿಲ್ಲಿಯಲ್ಲಿ ಸುದ್ದಿಗೋಷ್ಠಿಯನ್ನು ಹಮ್ಮಿಕೊಂಡಿದ್ದೆವು ಮತ್ತು ಬಳಿಕ ಕಾರ್ಯಕ್ರಮದ ಫೇಸ್‌ಬುಕ್ ಲೈವ್ ಮಾಡಿದ್ದೆವು. ಈ ಫೇಸ್‌ಬುಕ್ ಲೈವ್ ಬಗ್ಗೆ ಅವರಿಗೆ ಸಮಸ್ಯೆಯಿದೆ ಎಂದು ನಾನು ಭಾವಿಸಿದ್ದೇನೆ’ಎಂದು ಮುಕೇಶ ಸುದ್ದಿಸಂಸ್ಥೆಗೆ ತಿಳಿಸಿದರು.
‘ನಮ್ಮ ವಿರುದ್ಧ ಇಂತಹ ಆರೋಪಗಳನ್ನು ಹೊರಿಸುವ ಮೂಲಕ ರಾಜ್ಯ ಸರಕಾರವು ತನ್ನ ಅದಕ್ಷತೆಯನ್ನು ಮುಚ್ಚಿಟ್ಟುಕೊಳ್ಳಲು ಪ್ರಯತ್ನಿಸುತ್ತಿದೆ. ಇದು ಮುಖ್ಯವಾಹಿನಿಯೊಂದಿಗೆ ಸತ್ಯವನ್ನು ಹಂಚಿಕೊಳ್ಳುವುದನ್ನು ತಡೆಯುವ ಪ್ರಯತ್ನವಾಗಿದೆ. ಅದಕ್ಕೂ ಮಿಗಿಲಾಗಿ ನಮ್ಮ ಧ್ವನಿಗಳನ್ನು ಅಡಗಿಸುವ ಪ್ರಯತ್ನವಾಗಿದೆ ’ಎಂದು ಇಂದೋರಿ ಹೇಳಿದರು.