ಭತ್ತ ಖರೀದಿ ಕೇಂದ್ರ ತಕ್ಷಣ ಪ್ರಾರಂಭಿಸಲು ರಾಜ್ಯ ಸರಕಾರಕ್ಕೆ ಸೂಚನೆ: ಸಚಿವೆ ಶೋಭಾ ಕರಂದ್ಲಾಜೆ

ಉಡುಪಿ, ನ.4: ಭತ್ತಕ್ಕೆ ಕೇಂದ್ರ ಸರಕಾರ 1940 ರೂ. ಬೆಂಬಲ ಬೆಲೆ ಘೋಷಣೆ ಮಾಡಿದೆ. ಕೇಂದ್ರ ತಕ್ಷಣ ಖರೀದಿ ಆರಂಭಿಸಲು ಕರ್ನಾಟಕ ಸರಕಾರಕ್ಕೆ ಸೂಚನೆ ನೀಡಿದ್ದೇವೆ. ಈ ಬಗ್ಗೆ ತಕ್ಷಣ ಕ್ಯಾಬಿನೆಟ್‌ನಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಮುಖ್ಯ ಮಂತ್ರಿ ಹಾಗೂ ಕೃಷಿ ಸಚಿವರು ಭರವಸೆ ನೀಡಿದ್ದಾರೆ ಎಂದು ಕೃಷಿ ಮತ್ತು ರೈತರ ಕಲ್ಯಾಣ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಸಚಿವರು ಉಡುಪಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಈ ವಿಷಯ ತಿಳಿಸಿದರು. ಇಂದು ಕರಾವಳಿ ಜಿಲ್ಲೆಗಳ ರೈತ ಮುಖಂಡರು ತನ್ನನ್ನು ಭೇಟಿಯಾಗಿದ್ದು, ಅವರು ಎದುರಿಸುತ್ತಿರುವ ಬಹಳಷ್ಟು ಸಮಸ್ಯೆಗಳನ್ನು ನನ್ನ ಗಮನಕ್ಕೆ ತಂದಿದ್ದಾರೆ ಎಂದರು.
ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಪುನರುಜ್ಜೀವನಗೊಳಿಸುವ, ಜಿಲ್ಲೆಯ ಸಿಓ-4 ತಳಿಯ ಭತ್ತವನ್ನು ಎಂಎಸ್‌ಪಿಯಲ್ಲಿ ಪರಿಗಣಿಸಬೇಕು, ಕಾಡುಪ್ರಾಣಿಗಳ ಹಾವಳಿ ನಿಯಂತ್ರಣ ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ನನ್ನ ಗಮನ ಸೆಳೆದಿದ್ದಾರೆ. ನಾನು ಕೃಷಿ ಸಚಿವರ ಗಮನವನ್ನು ಈ ಬಗ್ಗೆ ಸೆಳೆದಿದ್ದು, ಕೂಡಲೇ ಇವುಗಳನ್ನು ಬಗೆಹರಿಸಿಕೊಡುವಂತೆ ತಿಳಿಸಿದ್ದೇನೆ ಎಂದು ಶೋಭಾ ತಿಳಿಸಿದರು.
ಕರಾವಳಿ ಜಿಲ್ಲೆಗಳಲ್ಲಿ ನವೆಂಬರ್-ಡಿಸೆಂಬರ್ ತಿಂಗಳಲ್ಲಿ ಭತ್ತದ ಕೊಯ್ಲು ಹಾಗೂ ಮಾರಾಟ ಮುಗಿದುಹೋಗುತ್ತೆ. ಖರೀದಿ ಕೇಂದ್ರ ಆರಂಭಿಸಲು ಇದು ಸಕಾಲ. ಹೀಗಾಗಿ ಈ ಬಗ್ಗೆ ರಾಜ್ಯ ಸರಕಾರ ತಕ್ಷಣ ಗಮನ ಹರಿಸಿ ಭತ್ತ ಖರೀದಿ ಕೇಂದ್ರವನ್ನು ಪ್ರಾರಂಭಿಸಬೇಕು ಎಂದವರು ಹೇಳಿದರು.
ಕರಾವಳಿಯಲ್ಲಿ ಭತ್ತ ಬೆಳೆಗಾರರ ಸಮಸ್ಯೆ ಬೇರೆಯೇ ಇದೆ. ಉಡುಪಿ ಜಿಲ್ಲೆಯಲ್ಲಿ ಸಿಒ-4 ತಳಿಯ ಭತ್ತ ಬೆಳೆಯುತ್ತಾರೆ. ಕುಚ್ಚಿಗೆ ಅಕ್ಕಿಗಾಗಿ ಈ ತಳಿಯ ಭತ್ತ ಬೆಳೆಯುತಿದ್ದಾರೆ. ಸಿಒ4 ಕುಚ್ಚಿಗೆ ಅಕ್ಕಿಯನ್ನೇ ಪಡಿತರದಲ್ಲಿ ನೀಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ. ಈ ಬಗ್ಗೆ ಆಹಾರ ಆಯುಕ್ತರ ಜೊತೆ ಮಾತನಾಡಿದ್ದೇನೆ. ಕೇಂದ್ರ ಸರಕಾರ ಈ ತಳಿಗೆ ಅವಕಾಶ ಕೊಟ್ಟಿಲ್ಲ ಎಂದಿದ್ದಾರೆ. ಹೊಸದಾಗಿ ಸರ್ವೆ ಮಾಡುವ ಅಗತ್ಯ ಇದೆ. ಈ ಬಗ್ಗೆ ವರದಿ ತರಿಸಿಕೊಂಡು ಕ್ರಮ ತೆಗೆದುಕೊಳ್ಳುತ್ತೇವೆ ಸಿಒ4 ತಳಿಯ ಭತ್ತ ಖರೀದಿ ಮಾಡಲು ಸೂಕ್ತಕ್ರಮ ಕೈಗೊಳ್ಳುತ್ತೇವೆ ಎಂದವರು ನುಡಿದರು.
ಜನತೆಗೆ ಕೇಂದ್ರದ ದೀಪಾವಳಿ ಕೊಡುಗೆ: ದೇಶದ ಜನತೆಗೆ ದೀಪಾವಳಿಯ ಕೊಡುಗೆಯಾಗಿ ಪೆಟ್ರೋಲ್ ಹಾಗೂ ಡೀಸೆಲ್ ದರ ಇಳಿಕೆ ಮಾಡಲಾಗಿದೆ ಎಂದು ಹೇಳಿದ ಶೋಭಾ, ಪೆಟ್ರೋಲಿಯಮ್ ಉತ್ಪನ್ನಗಳು ನಮ್ಮ ದೇಶದಲ್ಲಿ ಉತ್ಪಾದನೆಯಾಗುವ ಪದಾರ್ಥವಲ್ಲ. ಬೆಲೆ ನಿಗದಿ ಕೇಂದ್ರ ಸರಕಾರದ ನಿಯಂತ್ರಣದಲ್ಲೂ ಇಲ್ಲ ಎಂದರು.
ಆದರೂ ಕೇಂದ್ರ ಸರಕಾರ ಡೀಸೆಲ್ ಪೆಟ್ರೋಲ್ ದರ ಕಡಿಮೆ ಮಾಡಿದೆ. ದೀಪಾವಳಿಯ ಸಂದರ್ಭದಲ್ಲಿ ಹೊಸ ಕೊಡುಗೆ ಘೋಷಣೆ ಮಾಡಿದೆ. ದರ ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂಬ ಅಪೇಕ್ಷೆ ಇದೆ. ಆದರೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಏರುಪೇರಾದಾಗ ದರ ವ್ಯತ್ಯಾಸ ಆಗುತ್ತೆ. ಕಳೆದ ಹಲವಾರು ವರ್ಷಗಳಿಂದ ಈ ರೀತಿಯಾಗುತ್ತಿದೆ. ಕೇವಲ ನಮ್ಮ ಸರಕಾರ ಮಾತ್ರವಲ್ಲ ಆಯಾ ಸರ್ಕಾರಗಳ ಅವಧಿಯಲ್ಲೂ ಹೀಗೆಯೇ ಆಗಿದೆ. ದರ ಕಡಿಮೆಯಾಗಿದೆ. ಅದು ಹಾಗೆಯೇ ಉಳಿಯಬೇಕು ಎಂಬುದು ನಮ್ಮ ಅಪೇಕ್ಷೆ ಎಂದರು.
ಪೆಟ್ರೋಲ್ ದರ ಆಧರಿಸಿ ಇತರ ಪದಾರ್ಥಗಳ ಬೆಲೆ ಏರಿಕೆಯಾಗುತ್ತದೆ. ಪೆಟ್ರೋಲ್ ದರ ಆಧರಿಸಿ ಇತರ ಪದಾರ್ಥಗಳ ಬೆಲೆಯೂ ಏರಿಕೆಯಾಗುತ್ತದೆ. ದರ ಯಥಾಸ್ಥಿತಿ ಇದ್ದರೆ ಜನರಿಗೆ ಅನುಕೂಲವಾಗುತ್ತದೆ. ಪ್ರಧಾನಿಯವರು ಈಗ ಜನತೆಗೆ ಒಳ್ಳೆಯ ಕೊಡುಗೆ ನೀಡಿದ್ದಾರೆ ಎಂದವರು ಹೇಳಿದರು.
ಉಪಚುನಾವಣೆ ಫಲಿತಾಂಶದ ಆಧಾರದಲ್ಲಿ ಸರಕಾರದ ಆಡಳಿತವನ್ನು ಈಗ ವಿಶ್ಲೇಷಣೆ ಮಾಡಲು ಸಾಧ್ಯವಿಲ್ಲ. ಎರಡು ಪಕ್ಷಗಳು ತಲಾ ಒಂದು ಸ್ಥಾನ ಗೆದ್ದಿವೆ. ಪ್ರಜಾತಂತ್ರದಲ್ಲಿ ಜನರ ತೀರ್ಪನ್ನು ನಾವು ಸ್ವಾಗತಿಸಬೇಕು. ಹೋಲಿಕೆ ಮಾಡಲು ಹೋದರೆ ಸಿಂದಗಿಯಲ್ಲಿ ನಾವು ದೊಡ್ಡ ಅಂತರದಲ್ಲಿ ಗೆದ್ದಿದ್ದೇವೆ. ಉಪ ಚುನಾವಣೆಯಲ್ಲಿ ಇಷ್ಟು ದೊಡ್ಡ ಪ್ರಮಾಣದ ಅಂತರ ಸುಲಭದ ವಿಚಾರವಲ್ಲ ಓರ್ವ ಸಾಮಾನ್ಯ ಅಭ್ಯರ್ಥಿಯನ್ನು ಇಟ್ಟುಕೊಂಡು ಗೆದ್ದಿದ್ದೇವೆ. ಸಿಂದಗಿಯಲ್ಲಿ ಹೈ-ಫೈ ಅಭ್ಯರ್ಥಿ ಕಣದಲ್ಲಿ ಇರಲಿಲ್ಲ. ಈ ಫಲಿತಾಂಶ ನೋಡಿ ಒಬ್ಬ ವ್ಯಕ್ತಿ ಅಥವಾ ಸರ್ಕಾರದ ಬಗ್ಗೆ ನಿರ್ಧಾರ ಮಾಡುವುದು ಸರಿಯಲ್ಲ ಎಂದರು.







