ಬ್ರಹ್ಮಾವರದಲ್ಲಿ ಸಿಡಿಲು ಬಡಿದು 2 ಜಾನುವಾರು ಸಾವು, 5 ಮನೆಗೆ ಹಾನಿ
ಉಡುಪಿ ಜಿಲ್ಲೆಯಾದ್ಯಂತ ಗುಡುಗು, ಸಿಡಿಲು ಸಹಿತ ಮಳೆ

ಉಡುಪಿ, ನ.4: ಕಳೆದ ಕೆಲವು ದಿನಗಳಿಂದ ಜಿಲ್ಲೆಯಲ್ಲಿ ಸಂಜೆಯ ಬಳಿಕ ಭಾರಿ ಗುಡುಗು, ಸಿಡಿಲು ಸಹಿತ ಸುರಿಯುತ್ತಿರುವ ಮಳೆಯು ಗುರುವಾರ ಸಂಜೆ ಸಹ ಮುಂದುವರಿದಿದೆ. ನಿನ್ನೆಯಂತೆ ಇಂದು ಸಹ ಬ್ರಹ್ಮಾವರ ತಾಲೂಕಿನಾದ್ಯಂತ ಸಿಡಿಲಿನ ಆರ್ಭಟ ಜೋರಾಗಿತ್ತು. ಸಿಡಿಲು ಹಾಗೂ ಮಳೆ ರಾತ್ರಿಯೂ ಉಡುಪಿ ಆಸುಪಾಸಿನ ಮುಂದುವರಿದಿತ್ತು.
ಬೆಳಗಿನಿಂದ ಅಪರಾಹ್ನದವರೆಗೆ ಮೈಸುಡುವ ಬಿಸಿಲು ಇದ್ದು, ಪ್ರತಿದಿನ ಸಂಜೆ ನಾಲ್ಕು ಗಂಟೆಯ ಸುಮಾರಿಗೆ ಜಿಲ್ಲೆಯಾದ್ಯಂತ ಭಾರೀ ಗುಡುಗು ಮಿಂಚು ಸಹಿತ ಮಳೆಯಾಗುತ್ತಿದೆ. ಇದರಿಂದ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಸಾಮಾನ್ಯವೆನಿಸಿಬಿಟ್ಟಿದೆ. ಇಂದು ಸಹ ರಾತ್ರಿ 8 ಯವರೆಗೆ ವಿದ್ಯುತ್ ಕಣ್ಣುಮುಚ್ಚಾಲೆಯಾಡುತ್ತಿತ್ತು.
ವರ್ಷದ ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ಗುಡುಗು-ಸಿಡಿಲು ಸಹಿತ ಮಳೆ ಜಿಲ್ಲೆಯ ಜನರಿಗೆ ಹೊಸ ಅನುಭವವಾಗಿದೆ. ಸೆಪ್ಟೆಂಬರ್ ಬಳಿಕ ಹೆಚ್ಚಾಗಿ ಮಳೆ ಅಪರೂಪಕ್ಕೊಮ್ಮೆ ಕಾಣಿಸಿಕೊಳ್ಳುತ್ತಿತ್ತು. ಆದರೆ ಈ ಬಾರಿ ಮೇ ತಿಂಗಳ ಸುಮಾರಿಗೆ ಪ್ರಾರಂಭಗೊಂಡ ಮಳೆ, ಇನ್ನೂ ಹಿಂದೆ ರಿಯುವ ಸೂಚನೆಯೇ ಇಲ್ಲದಂತಾಗಿದೆ.
ದೀಪಾವಳಿ ಹಬ್ಬದ ಸಂಭ್ರಮಕ್ಕೆ ಸಂಜೆ ಸುರಿಯುವ ಮಳೆಯಿಂದ ತಣ್ಣೀರೆರಚಿದಂತಾಗಿದೆ. ಉಡುಪಿಯಲ್ಲಿ ವಾಹನಗಳ ಪೂಜೆ, ಅಂಗಡಿ ಪೂಜೆ, ಲಕ್ಷ್ಮೀ ಪೂಜೆಗಳೆಲ್ಲವೂ ಇಂದೇ ನಡೆಯುತಿದ್ದು, ಮಳೆಯಿಂದ ಇವುಗಳ ಕಳೆಯೂ ಕುಂದಿವೆ. ಜನರ ಹಾಗೂ ವಾಹನಗಳ ಅಪರಿಮಿತ ಓಡಾಟದಿಂದಾಗಿ ಬೆಳಗ್ಗೆ ಮತ್ತು ಸಂಜೆ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚಾರ ದುಸ್ತರವೆನಿಸಿದ್ದು, ಹಠಾತ್ ಸುರಿಯುವ ಮಳೆಯಿಂದ ರಸ್ತೆಯಲ್ಲೇ ನೀರು ಹರಿದು ಎಲ್ಲವೂ ಅಯೋಮಯ ವಾಗುತ್ತಿದೆ.
ಸಿಡಿಲಿನಿಂದ 5 ಮನೆಗಳಿಗೆ ಹಾನಿ: ಬುಧವಾರ ಸಂಜೆಯ ಗುಡುಗು- ಸಿಡಿಲಿಗೆ ಬ್ರಹ್ಮಾವರ ತಾಲೂಕಿನ ಆರು ಮನೆಗಳಿಗೆ ಸಿಡಿಲು ಬಡಿದು ಅಪಾರ ಪ್ರಮಾಣದ ಹಾನಿ ಸಂಭವಿಸಿದ್ದು, ಒಂದು 2 ಜಾನುವಾರುಗಳು ಮೃತಪಟ್ಟಿದೆ.
ಕೊಕ್ಕರ್ಣೆ ಸಮೀಪದ ನಾಲ್ಕೂರು ಗ್ರಾಮದ ಕುಶಲ ನಾಯ್ಕ ಎಂಬವರ ಮನೆಗೆ ನಿನ್ನೆ ಸಂಜೆ ಸಿಡಿಲು ಬಡಿದಿದ್ದು, ಇದರಿಂದ ಕೊಟ್ಟಿಗೆಯಲ್ಲಿದ್ದ ಎರಡು ಜಾನುವಾರುಗಳು ಮೃತಪಟ್ಟಿವೆ. ಇದರಿಂದ 60,000ರೂ.ಗಳಿಗೂ ಅಧಿಕ ನಷ್ಟದ ಅಂದಾಜು ಮಾಡಲಾಗಿದೆ.
ಉಪ್ಪೂರು ಗ್ರಾಮದ ರಮೇಶ್ ರಾವ್ ಎಂಬವರ ವಾಸ್ತವ್ಯದ ಪಕ್ಕಾ ಮನೆಗೆ ಸಿಡಿಲು ಬಡಿದು ಭಾಗಶ: ಹಾನಿಯಾಗಿದೆ. ಹನೆಹಳ್ಳಿ ಗ್ರಾಮದ ಮಧುಕರ ಸುವರ್ಣರ ಮನೆಗೂ ಸಿಡಿಲು ಬಡಿದು ಹಾನಿಯಾಗಿದೆ. ಇನ್ನು ಕುಂದಾಪುರ ತಾಲೂಕಿನ ಹಾರ್ದಳ್ಳಿ ಮಂಡಳ್ಳಿ ಗ್ರಾಮದ ಬೇಬಿ ಶೆಡ್ತಿಯವರ ಪಕ್ಕಾ ಮನೆಗೂ ಹಾನಿಯಾಗಿದ್ದು 75,000ರೂ.ನಷ್ಟದ ಅಂದಾಜು ಮಾಡಲಾಗಿದೆ.
ಬ್ರಹ್ಮಾವರ ತಾಲೂಕು 38 ಕಳ್ತೂರು ಗ್ರಾಮದ ಶಾರದಾ ಬಾಯಿ ಇವರ ಮನೆಗೆ 40,000ರೂ. ಹಾಗೂ ಪದ್ದು ಗಾಣಿಗರ ಮನೆಗೆ 25,000ರೂ.ನಷ್ಟ ಉಂಟಾದ ಬಗ್ಗೆ ವರದಿಗಳು ಬಂದಿವೆ.
ಮಳೆಯ ವಿವರ: ಇಂದು ಬೆಳಗ್ಗೆ 8:30ಕ್ಕೆ ಮುಕ್ತಾಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ಉಡುಪಿ ಜಿಲ್ಲೆಯಲ್ಲಿ 14.8ಮಿ.ಮೀ. ಮಳೆಯಾಗಿದೆ. ಉಡುಪಿ ಯಲ್ಲಿ 16.8ಮಿ.ಮೀ., ಬ್ರಹ್ಮಾವರ 13.3, ಕಾಪು 15.0, ಕುಂದಾಪುರ 11.4, ಬೈಂದೂರು 4.4, ಕಾರ್ಕಳ 20.4, ಹೆಬ್ರಿ 25.6 ಮಿ.ಮೀ. ಮಳೆ ಸುರಿದ ಬಗ್ಗೆ ವರದಿಗಳು ಬಂದಿವೆ.







.jpeg)
.jpeg)

