ಪೌರತ್ವ ಸಾಬೀತಾದರೆ ತೆರವುಗೊಳಿಸಿರುವ ಕುಟುಂಬಗಳ ಮರುಸ್ಥಳಾಂತರಕ್ಕೆ ಸಿದ್ಧ: ಹೈಕೋರ್ಟ್ ನಲ್ಲಿ ಅಸ್ಸಾಂ ಹೇಳಿಕೆ

ಗುವಾಹಟಿ,ನ.4: ದರಾಂಗ್ ಜಿಲ್ಲೆಯ ಗೋರುಖುಟಿಯಿಂದ ತೆರವುಗೊಳಿಸಲಾಗಿರುವ ಕುಟುಂಬಗಳ ಭಾರತೀಯ ಪೌರತ್ವ ಸಾಬೀತಾದರೆ ಮತ್ತು ಇತರ ಅಗತ್ಯಗಳು ಪೂರೈಕೆಯಾದರೆ ಅವುಗಳ ಮರುಸ್ಥಳಾಂತರಕ್ಕಾಗಿ ಸುಮಾರು 134 ಹೆಕ್ಟೇರ್ ಭೂಮಿಯನ್ನು ಗುರುತಿಸಲಾಗಿದೆ ಎಂದು ಅಸ್ಸಾಂ ಸರಕಾರವು ಗುವಾಹಟಿ ಉಚ್ಚ ನ್ಯಾಯಾಲಯಕ್ಕೆ ತಿಳಿಸಿದೆ. ಈ ಕುಟುಂಬಗಳು ತಮ್ಮ ಮೂಲ ಸ್ಥಳಗಳಲ್ಲಿ ಭೂರಹಿತರಾಗಿದ್ದಾರೆ ಎನ್ನುವುದರ ದೃಢೀಕರಣವೂ ಈ ಅಗತ್ಯಗಳಲ್ಲಿ ಸೇರಿದೆ.
ಆದರೆ ಧಾಲ್ಪುರ ಗ್ರಾಮಗಳ ಈ ಕುಟುಂಬಗಳು ಸರಕಾರಿ ಜಾಗವನ್ನು ಅತಿಕ್ರಮಿಸಿಕೊಂಡಿದ್ದರಿಂದ ಅವುಗಳಿಗೆ ಯಾವುದೇ ಪರಿಹಾರವನ್ನು ನೀಡಲಾಗುವುದಿಲ್ಲ ಎಂದು ಪ್ರತಿಪಕ್ಷ ನಾಯಕ ದೇವವ್ರತ ಸೈಕಿಯಾ ಅವರು ದಾಖಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಉತ್ತರವಾಗಿ ನ್ಯಾಯಾಲಯದಲ್ಲಿ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಸರಕಾರವು ಸ್ಪಷ್ಟಪಡಿಸಿದೆ.
ವಿಷಯವು ಅತಿಕ್ರಮಣ ಮತ್ತು ತೆರವಿಗೆ ಮಾತ್ರ ಸಂಬಂಧಿಸಿದೆ ಮತ್ತು ಭೂ ಸ್ವಾಧೀನಕ್ಕೆ ಎಳ್ಳಷ್ಟೂ ಸಂಬಂಧಿಸಿಲ್ಲ. ಹೀಗಾಗಿ ಭೂ ಸ್ವಾಧೀನ ಕಾಯ್ದೆಯಡಿ ಪುನರ್‌ವಸತಿ ಮತ್ತು ಪರಿಹಾರ ಇತ್ಯಾದಿಗಳು ಅಪ್ರಸ್ತುತವಾಗುತ್ತವೆ ಎಂದು ಅಸ್ಸಾಂ ಸರಕಾರವನ್ನು ಪ್ರತಿನಿಧಿಸಿರುವ ಸಿಪಾಝಾರ್ ಕಂದಾಯ ವೃತ್ತಾಧಿಕಾರಿ ಕಮಲಜೀತ್ ಶರ್ಮಾ ಅವರು ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ.
ಸೈಕಿಯಾರ ಅರ್ಜಿಯಲ್ಲದೆ ಸಿಫಾಝಾರ್‌ನಲ್ಲಿ ಹಿಂಸಾತ್ಮಕ ತೆರವುಗೊಳಿಸುವಿಕೆ ಕಾರ್ಯಾಚರಣೆಯ ಬಳಿಕ ಗುವಾಹಟಿ ಉಚ್ಚ ನ್ಯಾಯಾಲಯವೂ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದಾಖಲಿಸಿಕೊಂಡಿದ್ದು,ಇವೆರಡೂ ಅರ್ಜಿಗಳನ್ನು ಒಟ್ಟು ಸೇರಿಸಲಾಗಿದೆ.
ಬುಧವಾರ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದ ಮುಖ್ಯ ನ್ಯಾಯಾಧೀಶ ಸುಧಾಂಶು ಧುಲಿಯಾ ನೇತೃತ್ವದ ಪೀಠವು ವಿವರವಾದ ಕೌಂಟರ್ ಅಫಿಡವಿಟ್ ಸಲ್ಲಿಸಲು ರಾಜ್ಯ ಸರಕಾರಕ್ಕೆ ಒಂದು ವಾರದ ಗಡುವು ನೀಡಿದ ಬಳಿಕ ವಿಚಾರಣೆಯನ್ನು ಡಿ.14ಕ್ಕೆ ಮುಂದೂಡಿತು.
ಉಳಿದಿರುವ ಅತಿಕ್ರಮಣಕೋರರನ್ನು ತಾವಾಗಿಯೇ ಗುರುತಿಸಲಾಗಿರುವ ಪ್ರದೇಶಕ್ಕೆ ತೆರಳುವಂತೆ ಮನವೊಲಿಸಲು ಪ್ರಯತ್ನಗಳು ನಡೆದಿರುವುದರಿಂದ ಸದ್ಯಕ್ಕೆ ಅವರ ವಿರುದ್ಧ ಯಾವುದೇ ಬಲವಂತದ ಕ್ರಮಗಳನ್ನು ಕೈಗೊಳ್ಳುವುದಿಲ್ಲ ಎಂಬ ಅಸ್ಸಾಂ ಸರಕಾರದ ಭರವಸೆಯನ್ನು ಉಚ್ಚ ನ್ಯಾಯಾಲಯವು ಗಮನಕ್ಕೆ ತೆಗೆದುಕೊಂಡಿದೆ.
ಇಂತಹ ಕ್ರಮಗಳನ್ನು ಕೈಗೊಂಡ ಸಂದರ್ಭದಲ್ಲಿ ಈ ನ್ಯಾಯಾಲಯದ ಮುಂದೆ ಅರ್ಜಿಯನ್ನು ಸಲ್ಲಿಸಲು ಅರ್ಜಿದಾರರು ಸ್ವತಂತ್ರರಾಗಿದ್ದಾರೆ ಎಂದು ನ್ಯಾಯಾಲಯವು ಸ್ಪಷ್ಟಪಡಿಸಿತು.
ವಿದೇಶಿಯರು ಎಂಬ ಶಂಕೆಯಿಂದ ಮಾತ್ರವೇ ಜನರನ್ನು ಅವರ ಮನೆಗಳಿಂದ ತೆರವುಗೊಳಿಸುವಂತಿಲ್ಲ ಮತ್ತು ಬಳಿಕ ಅವರ ಪುನರ್‌ವಸತಿಗಾಗಿ ಪೌರತ್ವ ರುಜುವಾತನ್ನು ಕಡ್ಡಾಯಗೊಳಿಸುವಂತಿಲ್ಲ. ಎನ್‌ಆರ್‌ಸಿಯನ್ನು ಪ್ರಕಟಿಸಲಾಗಿಲ್ಲ ಮತ್ತು ಎನ್‌ಆರ್‌ಸಿ ಅಭಿಯಾನದ ಸತ್ಯತೆಯ ಬಗ್ಗೆ ಸರಕಾರವು ಶಂಕೆಯನ್ನು ಹೊಂದಿದೆ. ಹೀಗಿರುವಾಗ ಜನರನ್ನು ಹೊರದಬ್ಬಲು ಅದೇ ಎನ್‌ಆರ್‌ಸಿಯನ್ನು ಅದು ನೆಚ್ಚಿಕೊಳ್ಳಲು ಹೇಗೆ ಸಾಧ್ಯ ಎಂದು ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಸೈಕಿಯಾ ಪರ ವಕೀಲ ತಲ್ಹಾ ಅಬ್ದುಲ್ ರಹಮಾನ್ ಅವರು ಪ್ರಶ್ನಿಸಿದರು.
ವಿವಿಧ ಲೆಕ್ಕಾಚಾರಗಳಂತೆ ಸೆ.20 ಮತ್ತು 23ರಂದು ಧಾಲ್ಪುರ 1,2 ಮತ್ತು 3 ಗ್ರಾಮಗಳಲ್ಲಿ ಸುಮಾರು 1,200-1,400 ಮನೆಗಳನ್ನು ನೆಲಸಮಗೊಳಿಸಲಾಗಿದ್ದು,7,000ಕ್ಕೂ ಅಧಿಕ ಜನರು ನಿರ್ವಸಿತರಾಗಿದ್ದಾರೆ. ಗ್ರಾಮ ಮಾರುಕಟ್ಟೆಗಳು,ಮಸೀದಿಗಳು, ಖಬರ್‌ಸ್ಥಾನಗಳು,ಮದ್ರಸಾಗಳು ಮತ್ತು ಮಕ್ತೂಬ್‌ಗಳನ್ನೂ ನೆಲಸಮಗೊಳಿಸಲಾಗಿದೆ.