ನ.20ರ 'ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆಗೆ' ಕಂದಾಯ ಸಚಿವ ಆರ್.ಅಶೋಕ್
ಉಡುಪಿ, ನ.4: ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೊಕ್ಕರ್ಣೆ ಮತ್ತು ಆರೂರು ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ ನ.20 ಶನಿವಾರದಂದು ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ’ ನಡೆಯಲಿದ್ದು, ಇದರಲ್ಲಿ ಜಿಲ್ಲಾಧಿಕಾರಿ ಗಳೊಂದಿಗೆ ಕಂದಾಯ ಸಚಿವ ಆರ್.ಅಶೋಕ್ ಅವರೂ ಭಾಗವಹಿಸಲಿದ್ದಾರೆ.
ಕಂದಾಯ ಸಚಿವರು ನ.20ರಂದು ಬೆಳಗ್ಗೆ ಕೊಕ್ಕರ್ಣೆಯಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಲಿದ್ದಾರೆ. ಅದೇ ದಿನ ಅಪರಾಹ್ನ ಆರೂರು ಗ್ರಾಪಂ ವ್ಯಾಪ್ತಿಯಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಲಿದ್ದು, ಗ್ರಾಮದಲ್ಲಿ ವಾಸ್ತವ್ಯ ಮಾಡಲಿದ್ದಾರೆ.
ಮರುದಿನ ನ.21ರಂದು ಬೆಳಗ್ಗೆ ಕೆಂಜೂರು ಗ್ರಾಮದಲ್ಲಿರುವ ಕೊರಗರ ಕಾಲೋನಿಗೆ ಭೇಟಿ ನೀಡಲಿದ್ದಾರೆ. ಹಾಗೂ 38ನೇ ಕಳ್ತೂರು ಗ್ರಾಪಂ ವ್ಯಾಪ್ತಿಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಿದ್ದಾರೆ.
ಆದ್ದರಿಂದ ಕೊಕ್ಕರ್ಣೆ, ಆರೂರು, 38ನೇ ಕಳ್ತೂರು ಗ್ರಾಪಂ ವ್ಯಾಪ್ತಿಯ ಸಾರ್ವಜನಿಕರು ಹಾಗೂ ಗ್ರಾಮಸ್ಥರು ತಮ್ಮ ಅಹವಾಲುಗಳನ್ನು ಹಾಗೂ ಅರ್ಜಿಗಳನ್ನು ನ.16ರೊಳಗೆ ಬ್ರಹ್ಮಾವರ ತಾಲೂಕು ಕಚೇರಿಯಲ್ಲಿ ಅಥವಾ ಕೊಕ್ಕರ್ಣೆ, ಆರೂರು, 38ನೇ ಕಳ್ತೂರು ಗ್ರಾಮಕರಣಿಕರ ಕಚೇರಿಗಳಲ್ಲಿ ನೀಡಬಹುದು. ಈ ಅರ್ಜಿಗಳನ್ನು ಸಚಿವರ ಗ್ರಾಮ ಭೇಟಿಯ ಸಂದರ್ಭದಲ್ಲಿ ವಿಲೇವಾರಿ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಬಿ.ಸದಾಶಿವ ಪ್ರಭು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







