ಭ್ರಷ್ಟಾಚಾರ ಪ್ರಕರಣ: ಬಂಧಿತ ಮಾಜಿ ಸಚಿವ ಅನಿಲ್ ದೇಶಮುಖ್ ಆರೋಗ್ಯ ತಪಾಸಣೆ

ಮುಂಬೈ,ನ.4: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಈ.ಡಿ.)ದಿಂದ ಬಂಧಿಸಲ್ಪಟ್ಟಿರುವ ಎನ್‌ಸಿಪಿ ನಾಯಕ ಹಾಗೂ ಮಹಾರಾಷ್ಟ್ರದ ಮಾಜಿ ಗೃಹಸಚಿವ ಅನಿಲ ದೇಶಮುಖ (71) ಅವರನ್ನು ಗುರುವಾರ ಇಲ್ಲಿಯ ಸರಕಾರಿ ಜೆಜೆ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆಗೆ ಒಳಪಡಿಸಲಾಗಿದ್ದು,ಅವರ ಆರೋಗ್ಯವು ಸ್ಥಿರವಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ದೇಶಮುಖ ಪ್ರಸ್ತುತ ಈ.ಡಿ.ವಶದಲ್ಲಿದ್ದು,ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ವಿಚಾರಣೆ ನಡೆಸಲಾಗುತ್ತಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ 12 ಗಂಟೆಗೂ ಅಧಿಕ ಸಮಯ ದೇಶಮುಖರನ್ನು ಪ್ರಶ್ನಿಸಿದ್ದ ಈ.ಡಿ.ರಾತ್ರಿ ಅವರನ್ನು ಬಂಧಿಸಿತ್ತು.
ಈ.ಡಿ.ತನಗೆ ಜಾರಿಗೊಳಿಸಿದ್ದ ಹಲವಾರು ಸಮನ್ಸ್‌ಗಳನ್ನು ತಪ್ಪಿಸಿಕೊಂಡಿದ್ದ ದೇಶಮುಖ ಬಾಂಬೆ ಉಚ್ಚ ನ್ಯಾಯಾಲಯವು ಕಳೆದ ವಾರ ಅವುಗಳನ್ನು ರದ್ದುಗೊಳಿಸಲು ನಿರಾಕರಿಸಿದ ಬಳಿಕ ಸೋಮವಾರ ಈ.ಡಿ.ಕಚೇರಿಗೆ ಹಾಜರಾಗಿದ್ದರು. ಮಂಗಳವಾರ ವಿಶೇಷ ರಜಾಕಾಲದ ನ್ಯಾಯಾಲಯವು ಅವರನ್ನು ನ.6ರವರೆಗೆ ಈ.ಡಿ.ವಶಕ್ಕೆ ನೀಡಿದೆ.
ದೇಶಮುಖ ಅವರು ಅಪರಾಧದ ಹಣದ ಪ್ರಮುಖ ಫಲಾನುಭವಿಯಾಗಿದ್ದಾರೆ ಮತ್ತು ಅಕ್ರಮ ಹಣ ವರ್ಗಾವಣೆ ಅಪರಾಧದಲ್ಲಿ ನೇರವಾಗಿ ಭಾಗಿಯಾಗಿದ್ದಾರೆ ಎಂದು ಈ.ಡಿ.ನ್ಯಾಯಾಲಯದಲ್ಲಿ ಪ್ರತಿಪಾದಿಸಿತ್ತು.
ಭ್ರಷ್ಟಾಚಾರ ಮತ್ತು ಅಧಿಕಾರ ದುರುಪಯೋಗದ ಆರೋಪದಲ್ಲಿ ಸಿಬಿಐ ಈ ವರ್ಷದ ಎ.21ರಂದು ದೇಶಮುಖ ವಿರುದ್ಧ ಎಫ್‌ಐಆರ್‌ನ್ನು ದಾಖಲಿಸಿದ್ದು,ಬಳಿಕ ಈ.ಡಿ.ಅವರ ವಿರುದ್ಧ ತನಿಖೆಯನ್ನು ಆರಂಭಿಸಿತ್ತು.
ಈ ಹಿಂದೆ ತನ್ನ ವಿರುದ್ಧದ ಆರೋಪಗಳನ್ನು ನಿರಾಕರಿಸಿದ್ದ ದೇಶಮುಖ,ಈ.ಡಿ.ಯ ಇಡೀ ಪ್ರಕರಣವು ಕಳಂಕಿತ ಮುಂಬೈ ಪೊಲೀಸ್ ಅಧಿಕಾರಿ ಸಚಿನ ವಝೆಯವರ ದುರುದ್ದೇಶಪೂರಿತ ಹೇಳಿಕೆಗಳನ್ನು ಆಧರಿಸಿದೆ ಎಂದು ಹೇಳಿದ್ದರು.







