ಮದ್ಯದಂಗಡಿಗಳಲ್ಲಿ ಗೃಹ ಸಚಿವರ ಪುತ್ರನ ಹೆಸರಿನಲ್ಲಿ ವಸೂಲಿ: ಬಿಜೆಪಿ ಮುಖಂಡ ಸೇರಿ ಇಬ್ಬರ ಬಂಧನ

ಬೆಂಗಳೂರು, ನ.4: ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಪುತ್ರನ ಹೆಸರಿನಲ್ಲಿ ಮದ್ಯದಂಗಡಿಗಳಲ್ಲಿ ಹಣ ವಸೂಲಿ ಮಾಡುತ್ತಿದ್ದ ಆರೋಪ ಸಂಬಂಧ ಬಿಜೆಪಿ ಮುಖಂಡ ಸೇರಿ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಭವಾನಿ ರಾವ್ ಮೋರೆ ಹಾಗೂ ಅಭಿ ಎಂಬುವರು ಬಂಧಿತ ಆರೋಪಿಗಳಾಗಿದ್ದು, ಈ ಪೈಕಿ ಭವಾನಿ ರಾವ್ ಮೊರೆ ಶಿವಮೊಗ್ಗದಲ್ಲಿ ಬಿಜೆಪಿ ನಾಯಕನೆಂದು ಗುರುತಿಸಿಕೊಂಡಿದ್ದ ಎಂದು ತಿಳಿದುಬಂದಿದೆ.
ನಗರದ ಬಾರ್ ಅಂಡ್ ರೆಸ್ಟೋರೆಂಟ್‍ಗಳಿಗೆ ಹೋಗಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಹೆಸರು ಹಾಗೂ ಪುತ್ರನ ಹೆಸರು ದುರ್ಬಳಕೆ ಮಾಡಿಕೊಂಡು ಹಣ ವಸೂಲಿ ಮಾಡುತ್ತಿದ್ದರು ಎನ್ನಲಾಗಿದೆ.
ಈ ಸಂಬಂಧ ಬಾರ್ ಅಂಡ್ ರೆಸ್ಟೋರೆಂಟ್ ಅಸೋಸಿಯೇಷನ್ ವತಿಯಿಂದಗೃಹ ಸಚಿವರಿಗೆ ಮನವಿ ನೀಡಿ, ತಮ್ಮ ಹೆಸರಿನಲ್ಲಿ ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ವಿಚಾರ ಗಮನಕ್ಕೆ ತಂದಿದ್ದಾರೆ.
ಈ ಸಂಬಂಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತದನಂತರ, ದೂರಿನನ್ವಯ ಬೆಂಗಳೂರು ನಗರ ಪೊಲೀಸ್ ಆಯುಕ್ತರು ದೂರನ್ನು ತನಿಖೆಯ ಜವಾಬ್ದಾರಿಯನ್ನು ಸಿಸಿಬಿ ಪೊಲೀಸರಿಗೆ ವಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಭವಾನಿ ರಾವ್ ಮೊರೆ ಹಾಗೂ ಅಭಿ ಎಂಬುವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಭವಾನಿರಾವ್ ಮೋರೆ ರಾಜರಾಜೇಶ್ವರಿನಗರ ಕ್ಷೇತ್ರದ ಬಿಜೆಪಿ ವಿಸ್ತಾರಕನಾಗಿಯೂ ಕೆಲಸ ಮಾಡುತ್ತಿದ್ದ ಎಂದು ಹೇಳಲಾಗುತ್ತಿದ್ದು, ಈ ಸಂಬಂಧ ತನಿಖೆ ಮುಂದುವರೆಸಲಾಗಿದೆ ಸಿಸಿಬಿ ಅಧಿಕಾರಿ ಮಾಹಿತಿ ನೀಡಿದ್ದಾರೆ.







