ವಿರಾಜಪೇಟೆ: 8 ಕಿ.ಮೀ. ದೂರದ ಶಾಲೆಗೆ ಕಾಲ್ನಡಿಗೆಯಲ್ಲೇ ಸಾಗುವ ಹಾಡಿ ಮಕ್ಕಳು

ಸಾಂದರ್ಭಿಕ ಚಿತ್ರ
ಮಡಿಕೇರಿ ನ.4 : ದೇಶದ ಎಲ್ಲಾ ಮಕ್ಕಳು ವಿದ್ಯಾವಂತರಾಗಬೇಕೆಂದು ಸರಕಾರ ಹೇಳುತ್ತದೆ. ಆದರೆ ಮೂಲಭೂತ ಕೊರತೆಗಳು ಈ ನಿರೀಕ್ಷೆಯನ್ನು ಹುಸಿ ಮಾಡುತ್ತಿದ್ದು, ಶಿಕ್ಷಣ ಶ್ರೀಮಂತರ ಸ್ವತ್ತಾಗುತ್ತಿರುವ ಸಾಕ್ಷಿಗಳು ಇಂದಿಗೂ ಜೀವಂತವಾಗಿದೆ.
ದಕ್ಷಿಣ ಕೊಡಗಿನ ನಿಟ್ಟೂರು ಗ್ರಾ.ಪಂ ವ್ಯಾಪ್ತಿಯಲ್ಲಿ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಅಂಚಿನಲ್ಲಿ ಕುಂಬಾರಕಟ್ಟೆ ಹಾಡಿಯಿದೆ. ಗಿರಿಜನ ಕುಟುಂಬಗಳು ಇಲ್ಲಿ ವಾಸಿಸುತ್ತಿದ್ದು, ಮಕ್ಕಳು ವಿದ್ಯಾಭ್ಯಾಸಕ್ಕಾಗಿ ಬಾಳೆಲೆ ಮಾದರಿ ಪ್ರಾಥಮಿಕ ಶಾಲೆಯನ್ನೇ ಅವಲಂಬಿಸಬೇಕಾಗಿದೆ. ಈ ಶಾಲೆ ಸುಮಾರು 8 ಕಿ.ಮೀ ದೂರದಲ್ಲಿದ್ದು, ವಿದ್ಯಾರ್ಥಿಗಳು ಪ್ರತಿದಿನ 16 ಕಿ.ಮೀ ದೂರ ಕಾಲ್ನಡಿಗೆಯಲ್ಲಿ ಸಾಗಬೇಕಾಗಿದೆ.
ಕಾಡಿನ ಮಕ್ಕಳಿಗೆ ನಡೆದಾಡಲು ಆಯಾಸವಿಲ್ಲ, ಆದರೆ ನಾಗರಹೊಳೆ ಸಮೀಪವಿರುವುದರಿಂದ ಹುಲಿ, ಆನೆ, ಕರಡಿಗಳ ಭಯವಿದೆ. ಕನಿಷ್ಠ ಸರಕಾರಿ ಬಸ್ ವ್ಯವಸ್ಥೆಯಾದರೂ ಇದ್ದರೆ ವನ್ಯಜೀವಿಗಳ ಆತಂಕವಿಲ್ಲದೆ ಶಾಲೆಗೆ ಹೋಗಿ ಬರಬಹುದಿತ್ತು. ಲಾಭ, ನಷ್ಟದ ಲೆಕ್ಕಾಚಾರ ಮಾಡುವ ಸರಕಾರಿ ಸಾರಿಗೆ ಸಂಸ್ಥೆ ಈ ಭಾಗದಲ್ಲಿ ಬಸ್ ಸೇವೆ ನೀಡಲು ಮುಂದಾಗಿಲ್ಲ.
ಕೋವಿಡ್ ಲಾಕ್ಡೌನ್ ಸಡಿಲವಾದ ನಂತರ ಶಾಲೆಗಳು ಆರಂಭಗೊಂಡಿವೆ. ಆದರೆ ಎಲ್ಲಾ ಮಕ್ಕಳು ಶಾಲೆಗೆ ಹಾಜರಾಗಬೇಕೆನ್ನುವ ಅಪೇಕ್ಷೆ ವ್ಯಕ್ತಪಡಿಸುವ ಆಡಳಿತ ವ್ಯವಸ್ಥೆ ಮಾತ್ರ ಕುಗ್ರಾಮಗಳು ಮತ್ತು ಅರಣ್ಯದಂಚಿನ ವಿದ್ಯಾರ್ಥಿಗಳಿಗೆ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸುವ ಬಗ್ಗೆ ಚಿಂತನೆ ನಡೆಸಿಲ್ಲ.
ಶಾಸಕರಿಗೆ ಮನವಿ ಸಲ್ಲಿಕೆ
ನಿಟ್ಟೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಚಕ್ಕೇರ ಅಯ್ಯಪ್ಪ ಅವರು ಹಾಡಿ ಮಕ್ಕಳ ಶಿಕ್ಷಣದ ಹಿತದೃಷ್ಟಿಯಿಂದ ಸರಕಾರಿ ಬಸ್ ವ್ಯವಸ್ಥೆ ಕಲ್ಪಿಸಬೇಕೆಂದು ಒತ್ತಾಯಿಸಿದ್ದಾರೆ.
ಇಂದು ಶಾಸಕ ಕೆ.ಜಿ.ಬೋಪಯ್ಯ ಅವರನ್ನು ಭೇಟಿಯಾದ ಅವರು ಮನವಿ ಪತ್ರ ಸಲ್ಲಿಸಿ ತಕ್ಷಣ ಬಸ್ ಸಂಚಾರ ಆರಂಭಿಸಲು ಕ್ರಮ ಕೈಗೊಳ್ಳಬೇಕೆಂದು ಕೋರಿದರು.
ಇದಕ್ಕೆ ಸ್ಪಂದಿಸಿದ ಶಾಸಕರು ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲಬೀಳಗಿ ಅವರನ್ನು ಮೊಬೈಲ್ ಮೂಲಕ ಸಂಪರ್ಕಿಸಿ ಸ್ಥಳ ಪರಿಶೀಲನೆ ನಡೆಸುವಂತೆ ತಿಳಿಸಿದರು. ಹಾಡಿ ಮಕ್ಕಳ ವಿದ್ಯಾಭ್ಯಾಸಕ್ಕೆ ಯಾವುದೇ ತೊಂದರೆಯಾಗಬಾರದು ಎಂದ ಅವರು, ಶಿಕ್ಷಣ ಇಲಾಖೆ ಮೂಲಕ ಅಗತ್ಯ ನೆರವನ್ನು ನೀಡುವಂತೆ ಸೂಚನೆ ನೀಡಿದರು.
ಈ ಸಂದರ್ಭ ಪಂಚಾಯತ್ ಉಪಾಧ್ಯಕ್ಷೆ ಪಡಿಞರಂಡ ಕವಿತಾಪ್ರಭು, ಸದಸ್ಯರಾದ ಕಾಟಿಮಾಡ ಶರೀನ್ ಹಾಗೂ ಗ್ರಾಮದ ಪ್ರಮುಖರು ಹಾಜರಿದ್ದರು.








