ಬೆಂಗಳೂರು: ಅನುದಾನದ ಕೊರತೆ; ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿದ ಗುತ್ತಿಗೆ ಕಂಪೆನಿ

ಬೆಂಗಳೂರು, ನ.4: ಸಿಂಪ್ಲೆಕ್ಸ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ಗುತ್ತಿಗೆ ಕಂಪನಿ ಸುಮಾರು 206 ಕೋಟಿ ವೆಚ್ಚದಲ್ಲಿ ಕೈಗೊಂಡಿದ್ದ ಪಾಲಿಕೆಯ ಕಾಮಗಾರಿಯನ್ನು ಕೈಬಿಟ್ಟಿದೆ. ಈಜಿಪುರದಿಂದ ಕೇಂದ್ರಿಯ ವಿದ್ಯಾಯಲದವರೆಗಿನ ಫ್ಲೈ ಓವರ್ ಗುತ್ತಿಗೆ ಕಾಮಗಾರಿಯನ್ನು ಕಂಪನಿಗೆ ಬಿಬಿಎಂಪಿ ವಹಿಸಿದ್ದು, ಈಗ ಪಾಲಿಕೆಯು ಅನುದಾನವನ್ನು ಬಿಡುಗಡೆಗೊಳಿಸದ ಕಾರಣ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಲಾಗಿದೆ ಎಂದು ಕಂಪನಿ ತಿಳಿಸಿದೆ.
ಪಾಲಿಕೆ 2017ರಲ್ಲಿ ಕಂಪನಿಗೆ ಕಾರ್ಯಾದೇಶವನ್ನು ನೀಡಿ, 2019ರೊಳಗೆ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಪಾಲಿಕೆ ತಿಳಿಸಿತ್ತ್ತು. ಆದರೆ ಗುತ್ತಿಗೆ ಕಾಮಗಾರಿ ಪಡೆದು ನಾಲ್ಕೂ ವರ್ಷಗಳಾದರೂ, ಕಂಪನಿಯು ಇನ್ನೂ ಪೂರ್ಣಗೊಳಿಸಿಲ್ಲ. ಇದೇ ವರ್ಷ ಜುಲೈ 29ರಂದು ಹೈಕೋರ್ಟ್ ಕಾಮಗಾರಿಯನ್ನು ಕೂಡಲೇ ಪೂರ್ಣಗೊಳಿಸುವಂತೆ ಪಾಲಿಕೆಗೆ ನಿರ್ದೇಶನ ನೀಡಿದ್ದರೂ, ಪಾಲಿಕೆಯು ಕಾಮಗಾರಿಯನ್ನು ಪೂರ್ಣಗೊಳಿಸುವಲ್ಲಿ ವಿಫಲವಾಗಿದೆ. ಈಗ ಕಂಪನಿಯು ಹಣ ಇಲ್ಲವೆಂದು ಫ್ಲೈ ಓವರ್ ಕಾಮಗಾರಿಯನ್ನು ಕೈಬಿಟ್ಟಿರುವುದು, ಪಾಲಿಕೆಯನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳಿದೆ.
ಸಿಂಪ್ಲೆಕ್ಸ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ಗುತ್ತಿಗೆ ಕಂಪನಿಯು ಇದಕ್ಕೂ ಮೊದಲು ಬಿಎಂಆರ್‍ಸಿಎಲ್‍ನಿಂದ ಗುತ್ತಿಗೆ ಕಾಮಗಾರಿಯನ್ನು ಪಡೆದಿತ್ತು. ಅಲ್ಲಿಯೂ ಸರಿಯಾಗಿ ಗುತ್ತಿಗೆ ಕಾಮಗಾರಿಯನ್ನು ನಡೆಸದೇ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು. 2017ರಲ್ಲಿ ಬನ್ನೇರುಘಟ್ಟ ರಸ್ತೆ ಮತ್ತು ತುಮಕೂರು ರಸ್ತೆಗಳಲ್ಲಿ ಕಾಮಗಾರಿಯನ್ನು ವಹಿಸಿಕೊಂಡಿತ್ತು. ಆದರೆ ಕಾಮಗಾರಿಗಳನ್ನು ಸರಿಯಾದ ಸಮಯಕ್ಕೆ ಪೂರ್ಣಗೊಲಿಸಲಿಲ್ಲ. ಇದರಿಂದ ಸಾರ್ವಜನಿಕರು ನಮ್ಮ ಮೆಟ್ರೋಗೆ ದೂರು ಸಲ್ಲಿಸಿದ್ದರು. ನಮ್ಮ ಮೆಟ್ರೋ ದೂರನ್ನು ಪರಿಶೀಲಿಸಿ, ಕಂಪನಿಯಿಂದ ಗುತ್ತಿಗೆಯನ್ನು ಹಿಂಪಡೆದಿತ್ತು.
ಈಗ ಹಣವಿಲ್ಲವೆಂದು ಫ್ಲೈ ಓವರ್ ಕಾಮಗಾರಿ ಮಾಡದೇ ಸಿಂಪ್ಲೆಕ್ಸ್ ಇನ್ಫಾಸ್ಟ್ರಕ್ಚರ್ ಕಂಪನಿ ಕೈ ಬಿಟ್ಟಿದೆ. ಹಾಗಾಗಿ ಸ್ವತಃ ಬಿಬಿಎಂಪಿಯೇ ಫ್ಲೈಓವರ್ ನಿರ್ಮಿಸಲು ನಿರ್ಧರಿಸಿದ್ದು, ಬಿಬಿಎಂಪಿ ಅಧಿಕಾರಿಗಳು ಫ್ಲೈ ಓವರ್ ನಿರ್ಮಾಣಕ್ಕೆ ಬೇಕಿರುವ ಸಾಮಗ್ರಿಗಳನ್ನ ಖುದ್ದು ಖರೀದಿ ಮಾಡುತ್ತಿದ್ದಾರೆ ಎಂದು ಪಾಲಿಕೆ ತಿಳಿಸಿದೆ.







