ಬೆಂಗಳೂರು: ಕೋಟ್ಯಂತರ ರೂ. ಔಷಧ ಬಿಲ್ ಬಾಕಿ; ಸರಬರಾಜುದಾರರ ಕಂಗಾಲು
ಬೆಂಗಳೂರು, ನ.4: ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ(ಕೆಎಸ್‍ಎಂಎಸ್‍ಸಿಎಲ್)ದಲ್ಲಿ ಕೋಟ್ಯಂತರ ರೂ.ಔಷಧ ಬಿಲ್, ಭದ್ರತಾ ಠೇವಣಿ ಹಾಗೂ ಇಎಂಡಿ ಬಾಕಿ ಇದೆ. ಹಲವು ವರ್ಷಗಳಿಂದ ಬಾಕಿ ಔಷಧ ಬಿಲ್‍ಗಳಿಗೆ ಹಣ ಪಾವತಿಸಲು ವಿಳಂಬವಾಗುತ್ತಿರುವುದರಿಂದ ಔಷಧ ಪೂರೈಸಿದ್ದ ಸರಬರಾಜುದಾರರು ಕಂಗಾಲಾಗಿದ್ದಾರೆ.
ಟೆಂಡರ್ ನಿಯಮಾನುಸಾರ 30 ದಿನದೊಳಗೆ ಔಷಧ ಬಿಲ್‍ಗಳಿಗೆ ಹಣ ಪಾವತಿಸಬೇಕೆಂಬ ನಿಯಮವಿದೆ. ನೆರೆಯ ತಮಿಳುನಾಡು ಸೇರಿ ಇನ್ನಿತರ ರಾಜ್ಯಗಳಲ್ಲಿ ನಿಗದಿತ ಸಮಯದಲ್ಲಿ ಪೇಮೆಂಟ್ ಆಗುತ್ತಿದೆ. ಆದರೆ, ಕೆಎಸ್‍ಎಂಎಸ್‍ಸಿಎಲ್‍ನಲ್ಲಿ ಸರಿಯಾದ ಸಮಯಕ್ಕೆ ಬಾಕಿ ಬಿಲ್‍ಗಳಿಗೆ ಹಣ ಪಾವತಿಯಾಗುತ್ತಿಲ್ಲ. ಲಕ್ಷಾಂತರ ರೂ.ಭದ್ರತಾ ಠೇವಣಿ ಬಾಕಿಯಿದ್ದು, ಕೂಡಲೇ ಇವುಗಳನ್ನು ಕ್ಲಿಯರ್ ಮಾಡುವಂತೆ ಸರಕಾರಕ್ಕೆ ಪೂರೈಕೆದಾರರು ಮನವಿ ಮಾಡಿದ್ದಾರೆ.
ಔಷಧ ಪೂರೈಸಿದ ವೇಳೆ ಬಿಲ್‍ಗಳನ್ನು ನಿಗಮಕ್ಕೆ ಕಳುಹಿಸುತ್ತೇವೆ. ಬಳಿಕ ಗೋದಾಮಿನಲ್ಲಿ ಔಷಧ ಸ್ವೀಕರಿಸುವವರು ನಿಗಮಕ್ಕೆ ಬಿಲ್ ಕಳುಹಿಸುತ್ತಾರೆ. ಆದರೆ, ಕೆಲ ಅಧಿಕಾರಿಗಳು ಸರಿಯಾಗಿ ಕಮಿಷನ್ ನೀಡದಿದ್ದರೆ ನಾವು ಕಳುಹಿಸಿರುವ ಬಿಲ್‍ಗಳನ್ನು ಮಾಯ ಮಾಡಿ ಮತ್ತೊಮ್ಮೆ ಬಿಲ್ ಕಳುಹಿಸುವಂತೆ ಕಿರುಕುಳ ಕೊಡುತ್ತಿದ್ದಾರೆ ಎಂದು ಸರಬರಾಜುದಾರರು ಹೇಳಿದರು.
ಪೂರೈಕೆದಾರರು ಪೂರೈಸಿರುವ ಬಾಕಿ ಬಿಲ್ ಪಾವತಿಗಳು, ಇಎಂಡಿಗಳು ಮತ್ತು ಭದ್ರತಾ ಠೇವಣಿ ನಿಲ್ಲಿಸಲಾಗಿದೆ. ಔಷಧ ಮತ್ತು ವೈದ್ಯಕೀಯ ಪರಿಕರಗಳನ್ನು ಪೂರೈಸಿದ್ದ ಪೂರೈಕೆದಾರರಿಗೆ ಸಮರ್ಪಕವಾಗಿ ಬಾಕಿ ಬಿಲ್‍ಗಳಿಗೆ ಪಾವತಿಸುತ್ತಿಲ್ಲ ಎಂಬ ದೂರು ಕೇಳಿಬಂದಿದೆ.







