ದೀಪಾವಳಿಯಲ್ಲಿ ದಿಲ್ಲಿ ವಾಯು ಗುಣಮಟ್ಟ ‘ತೀರಾ ಕಳಪೆ’: ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ದತ್ತಾಂಶ

ಹೊಸದಿಲ್ಲಿ, ನ.4: ದೀಪಾವಳಿಯ ಹಬ್ಬದ ದಿನವಾದ ಗುರುವಾರ ರಾಜಧಾನಿ ಹೊಸದಿಲ್ಲಿಯಲ್ಲಿ ವಾಯುವಿನ ಗುಣಮಟ್ಟ ಅತ್ಯಂತ ಕಳಪೆಯಾಗಿತ್ತೆಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಬಿಡುಗಡೆಗೊಳಿಸಿದ ದತ್ತಾಂಶಗಳು ತಿಳಿಸಿವೆ.
ಏಜೆನ್ಸಿಯ ವಾಯು ಗುಣಮಟ್ಯ ಸೂಚ್ಯಂಕ (ಎಕ್ಯೂಐ)ದ ಮಾಪಕದಲ್ಲಿ ರೀಡಿಂಗ್ 100ಕ್ಕಿಂತ ಹೆಚ್ಚಿದ್ದಲ್ಲಿ, ವಾಯುಮಾಲಿನ್ಯವು ಆರೋಗ್ಯಕ್ಕೆ ಅಸುರಕ್ಷಿತವಾಗಿದೆ ಎಂದು ಪರಿಗಣಿಸಲಾಗುತ್ತದೆ. ರಾಜಧಾನಿಲ್ಲಿ 24 ತಾಸುಗಳ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕವು 314ರ ರೀಡಿಂಗ್ ದಾಖಲಿಸಿದ್ದು, ಅತ್ಯಂತ ಕಳಪೆಯಾಗಿರುವುದನ್ನು ತೋರಿಸುತ್ತದೆ. ಈ ಪ್ರಮಾಣದ ವಾಯುಮಾಲಿನ್ಯಕ್ಕೆ ನಗರದ ಜನತೆ ದೀರ್ಘಸಮಯದವರೆಗೆ ತಮ್ಮನ್ನು ಒಡ್ಡಿಕೊಂಡಲ್ಲಿ ಅವರು ಉಸಿರಾಟದ ಸಮಸ್ಯೆಗಳಿಗೆ ತುತ್ತಾಗುವ ಅಪಾಯವಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಗುರುವಾರ ಮಧ್ಯಾಹ್ನ 3.35ರ ವೇಳೆಗೆ ರಾಜಧಾನಿ ಹೊಸದಿಲ್ಲಿಯ ಒಟ್ಟಾರೆ ವಾಯುಗುಣಮಟ್ಟ ಸೂಚ್ಯಂಕವು ಮಾಪಕದಲ್ಲಿ 339ನ್ನು ತೋರಿಸಿದೆಯೆಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ದಿಲ್ಲಿಯ 24 ತಾಸುಗಳ ಸರಾಸರಿ ವಾಯುಗುಣಮಟ್ಟ ಸೂಚ್ಯಂಕವು ಬುಧವಾರ 341, ಮಂಗಳವಾರ 303 ಹಾಗೂ ಸೋಮವಾರ 281 ಆಗಿತ್ತು.
ನೆರೆಹೊರೆಯ ರಾಜ್ಯಗಳ ರೈತರು ಕಟಾವಿನ ಬಳಿಕ ತಮ್ಮ ಹೊಲಗಳಲ್ಲಿ ಪೈರುಗಳ ಕೂಳೆಗಳನ್ನು ಸುಡುವುದರಿಂದ, ಪ್ರತಿಕೂಲಕರವಾದ ವೇಗವಾಗಿ ಬೀಸುವ ಗಾಳಿ ಹಾಗೂ ವಾಹನಗಳ ಸಂಚಾರದಿಂದ ಹೊಗೆ ಹೊರಸಸೂಸುವಿಕೆ, ಇವೆಲ್ಲವುಗಳ ಕಾರಣದಿಂದಾಗಿ ಅಕ್ಟೋಬರ್,ನವೆಂಬರ್ ತಿಂಗಳುಗಳಲ್ಲಿ ರಾಜಧಾನಿ ಹೊಸದಿಲ್ಲಿಯಲ್ಲಿ ವಾಯುಮಾಲಿನ್ಯವು ಅಧಿಕವಾಗುತ್ತದೆ.
ಸೆಪ್ಟೆಂಬರ್ನಲ್ಲಿ ದಿಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಯು, 2022ರ ಜನವರಿ 1ರವರೆಗೆ ಪಟಾಕಿಗಳ ಮಾರಾಟ ಹಾಗೂ ಸುಡುವಿಕೆಯನ್ನು ನಿಷೇಧಿಸಿತ್ತು.







