ಜನಪ್ರಿಯ 'ಹಲಾಲ್ ಆಹಾರಗಳ' ಪ್ರವಾಸಿ ತಾಣವಾದ ಬ್ರೆಝಿಲ್ ನ ನಗರ

photo:AFP
ಸಾವೊಪಾಲೊ ನ.3: ಬ್ರೆಝಿಲ್ ನ ಪ್ರಮುಖ ಪ್ರವಾಸೋದ್ಯಮ ಕೇಂದ್ರವಾಗಿರುವ ಫಾಝ್ಡು ಇಗ್ವೆಸುನಲ್ಲಿ ಹಲವು ಅರಬ್ ಮಾಲಕತ್ವದ ರೆಸ್ಟೋರೆಂಟ್ ಗಳಿದ್ದು ಈ ನಗರ ಹಲಾಲ್ ಪ್ರವಾಸಿ ತಾಣವಾಗಿ ಜನಪ್ರಿಯವಾಗಿದೆ. ದಕ್ಷಿಣ ಅಮೆರಿಕ ದೇಶದಲ್ಲಿರುವ ಅತೀದೊಡ್ಡ ಜಲಪಾತವನ್ನು ಹೊಂದಿರುವ ಫಾಝ್ಡು ಇಗ್ವೆಸು ನಗರಕ್ಕೆ 2019ರಲ್ಲಿ 2 ಮಿಲಿಯನ್ಗೂ ಅಧಿಕ ಮಂದಿ ಭೇಟಿ ನೀಡಿದ್ದಾರೆ. ಜನರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಮುಸ್ಲಿಂ ಕಾನೂನಿನಲ್ಲಿ ಸೂಚಿಸಿರುವಂತೆ ತಯಾರಿಸಲಾದ ಮಾಂಸವನ್ನು ಹಲಾಲ್ ಎಂದು ಹೆಸರಿಸಲಾಗುತ್ತದೆ. ಕೊರೋನ ಸೋಂಕಿನ ಕಾರಣದಿಂದಾಗಿ ಪ್ರವಾಸಿಗಳ ಸಂಖ್ಯೆಯಲ್ಲಿ ಭಾರೀ ಇಳಿಕೆಯಾದ ಬಳಿಕ, ಇಲ್ಲಿರುವ ಹಲಾಲ್ ಕೇಂದ್ರಗಳು ವಿಶ್ವದಾದ್ಯಂತದ ಮುಸ್ಲಿಮರನ್ನು ಕೈಬೀಸಿ ಕರೆಯುತ್ತಿವೆ
.
ಅರ್ಜೆಂಟೀನಾ ಮತ್ತು ಪರಗ್ವೇಯ ಗಡಿಭಾಗಕ್ಕೆ ಹೊಂದಿಕೊಂಡಿರುವ ಫಾಝ್ಡು ಇಗ್ವೆಸು ನಗರದಲ್ಲಿರುವ ಸುಮಾರು 2,60,000 ಜನಸಂಖ್ಯೆಯಲ್ಲಿ ಸುಮಾರು 7% ಮುಸ್ಲಿಮರಿದ್ದಾರೆ. ಪರಗ್ವೇಯ ಗಡಿಪಟ್ಟಣದಲ್ಲಿ ಸಾವಿರಾರು ಅರಬರು ನೆಲೆಸಿದ್ದಾರೆ. ಲ್ಯಾಟಿನ್ ಅಮೆರಿಕಾದಲ್ಲಿನ ಮುಸ್ಲಿಮರ ಪ್ರಮುಖ ಪ್ರಾರ್ಥನಾ ಕೇಂದ್ರ ಒಮರ್ ಇಬ್ನ್ ಅಲ್ ಖತ್ತಾಬ್ ಮಸೀದಿಯೂ ಈ ವಲಯದಲ್ಲಿದೆ. ಫಾಝ್ಡು ಇಗ್ವೆಸು ನಗರದಲ್ಲಿ ಅರಬ್ ಮಾಲಕತ್ವದ ಹಲವು ರೆಸ್ಟಾರೆಂಟ್ ಹಾಗೂ ಅಂಗಡಿಗಳಿವೆ. ಈ ನಗರಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ಸ್ಥಳೀಯ ಗೈಡ್(ಮಾರ್ಗದರ್ಶಿ)ಗಳು ಇಲ್ಲಿನ ಅರಬ್ ತಿನಿಸುಗಳ ಸ್ವಾದದ ಬಗ್ಗೆಯೂ ವಿವರಿಸುತ್ತಾರೆ.
ಈ ಪ್ರದೇಶದಲ್ಲಿ ಹಲಾಲ್ ನ ಮೂಲಸೌಕರ್ಯ ಸಾಕಷ್ಟಿದ್ದು ಇದರಿಂದ ಸ್ಥಳೀಯ ಸಮುದಾಯದ ಬೇಡಿಕೆ ಪೂರೈಸಲು ನಮಗೆ ಬಹಳ ಅನುಕೂಲವಾಗಿದೆ ಎಂದು ಸಿಡಯಲ್ ಹಲಾಲ್ ನ ಸಿಇಒ ಅಲಿ ಸೈಫಿ ಹೇಳಿದ್ದಾರೆ. ಇವರ ಸಂಸ್ಥೆಗೆ ಬ್ರೆಝಿಲ್ ನ ಹಲಾಲ್ ಪ್ರಮಾಣಿತ ಸಂಸ್ಥೆಯ ಮಾನ್ಯತೆ ಲಭಿಸಿದೆ.
ವಿಶ್ವದಾದ್ಯಂತದ ಸುಮಾರು 1.9 ಬಿಲಿಯನ್ ಮುಸ್ಲಿಮ್ ಜನರನ್ನು ಗಮನದಲ್ಲಿಟ್ಟುಕೊಂಡು ಸೈಫಿ ರೂಪಿಸಿದ ಯೋಜನೆಯನ್ನು ನಗರದ ಮೇಯರ್ ಚಿಕೊ ಬ್ರಸಿಲಿರೋ ಅಂಗೀಕರಿಸಿ ಅನುಮತಿ ನೀಡಿದ್ದಾರೆ. ನಮ್ಮ ನಗರದಲ್ಲಿ ಜಗತ್ತಿನ ಹಲವು ಪ್ರಾಕೃತಿಕ ವಿಸ್ಮಯಗಳಿದ್ದು ಇವು ಖಂಡಿತವಾಗಿಯೂ ಹಲವು ಮುಸ್ಲಿಮರನ್ನು ಆಕರ್ಷಿಸಲಿದೆ ಎಂದು ಬ್ರಸಿಲಿರೋ ಹೇಳಿದ್ದಾರೆ.
ಮುಸ್ಲಿಮರು ವಿದೇಶಕ್ಕೆ ತೆರಳುವಾಗ , ಅದರಲ್ಲೂ ಕುಟುಂಬದ ಸಮೇತ ವಿದೇಶಕ್ಕೆ ತೆರಳುವಾಗ ಅವರಿಗೆ ಎದುರಾಗುವ ಪ್ರಮುಖ ಸಮಸ್ಯೆ ಆಹಾರದ್ದು. ಈ ಬಗ್ಗೆ ನಮಗೆ ಬಹಳ ಆತಂಕ, ಕಾತರ ಇರುತ್ತದೆ. ಈ ಹಿನ್ನೆಲೆಯಲ್ಲಿ 100% ಹಲಾಲ್ ಪ್ಯಾಕೇಜ್ ಒದಗಿಸುವ ಯೋಜನೆ ಇಲ್ಲಿದೆ ಎಂದು ಸ್ಥಳೀಯರಾದ ಶೇಖ್ ಒಸುಮಾ ಎಲ್ಝಾಹೆದ್ ಸಂತಸ ವ್ಯಕ್ತಪಡಿಸಿದ್ದಾರೆ.







