ಜೈಲುಪಾಲಾದ ಮಹಾರಾಷ್ಟ್ರ ಮಾಜಿ ಸಚಿವ ಅನಿಲ್ ದೇಶಮುಖ್ ಪುತ್ರನಿಗೂ ಇಡಿ ಸಮನ್ಸ್

ಅನಿಲ್ ದೇಶಮುಖ್
ಮುಂಬೈ: ಹಣಕಾಸು ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಜೈಲುಪಾಲಾಗಿರುವ ಮಹಾರಾಷ್ಟ್ರದ ಮಾಜಿ ಗೃಹಸಚಿವ ಅನಿಲ್ ದೇಶಮುಖ್ ಪುತ್ರನಿಗೂ ಇದೀಗ ಕಾನೂನು ಜಾರಿ ನಿರ್ದೇಶನಾಲಯ ಸಮನ್ಸ್ ನೀಡಿದೆ.
ಶುಕ್ರವಾರ ವಿಚಾರಣೆಗೆ ಹಾಜರಾಗುವಂತೆ ಹೃಷಿಕೇಶ್ ದೇಶಮುಖ್ ಅವರಿಗೆ ಸಮನ್ಸ್ ನೀಡಲಾಗಿದೆ. ದೇಶಮುಖ್ಗೆ ಈಗಾಗಲೇ ಇಡಿ ಕಸ್ಟಡಿ ವಿಧಿಸಲಾಗಿದೆ.
ಕಾನೂನು ಜಾರಿ ನಿರ್ದೇಶನಾಲಯದ ಪ್ರಕಾರ, ಸೇವೆಯಿಂದ ವಜಾಗೊಂಡ ಪೊಲೀಸ್ ಇನ್ಸ್ಪೆಕ್ಟರ್ ಸಚಿನ್ ವಾರ್ "ಬಾರ್ ವ್ಯವಹಾರ ಸುಲಲಿತವಾಗಿ ನಡೆಯುವುದನ್ನು ಖಾತರಿಪಡಿಸಲು" ಆರ್ಕೆಸ್ಟ್ರಾ ಬಾರ್ನಿಂದ 4.7 ಕೋಟಿ ರೂಪಾಯಿ ವಸೂಲಿ ಮಾಡಿದ್ದು, ಈ ಹಣವನ್ನು ದೇಶಮುಖ್ನ ಆಪ್ತ ಸಹಾಯಕನಾಗಿದ್ದ ಸಂಜೀವ್ ಪಲಾಂಡೆಗೆ ನೀಡಲಾಗಿದೆ. ಆ ಬಳಿಕ ಇದನ್ನು ನಾಗ್ಪುರದ ಕೆಲವರಿಗೆ ವರ್ಗಾಯಿಸಲಾಗಿದೆ.
ಹವಾಲಾ ಚಾನಲ್ಗಳ ಮೂಲಕ ಈ ಹಣವನ್ನು ಬೋಗಸ್ ಕಂಪನಿಗಳನ್ನು ನಿರ್ವಹಿಸುತ್ತಿರುವ ದೆಹಲಿ ಮೂಲದ ಸುರೇಂದ್ರ ಕುಮಾರ್ ಜೈನ್ ಹಾಗೂ ವೀರೇಂದ್ರ ಜೈನ್ ಅವರಿಗೆ ವರ್ಗಾಯಿಸಲಾಗಿದೆ. ಜೈನ್ ಸಹೋದರರು ಈ ಹಣವನ್ನು ದೇಶಮುಖ್ ಕುಟುಂಬದ ನಿಯಂತ್ರಣದಲ್ಲಿರುವ ನಾಗ್ಪುರ ಮೂಲದ ಶ್ರೀ ಸಾಯಿ ಶಿಕ್ಷಣ ಸಂಸ್ಥಾನಕ್ಕೆ ದೇಣಿಗೆ ರೂಪದಲ್ಲಿ ನೀಡಿದ್ದಾರೆ.
ಜೈನ್ ಸಹೋದರರು ಹೃಷಿಕೇಶ್ ದೇಶಮುಖ್ ಅವರ ಸೂಚನೆಯಂತೆ ಕಾರ್ಯ ನಿರ್ವಹಿಸಿದ್ದು, ಈ ಹಿನ್ನೆಲೆಯಲ್ಲಿ ಅವರ ಹೇಳಿಕೆ ದಾಖಲಿಸಿಕೊಳ್ಳಬೇಕಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ತಂದೆಯ ಹಣಕಾಸು ವ್ಯವಹಾರಗಳ ಬಗ್ಗೆ ಹೃಷಿಕೇಶ್ ಅವರನ್ನು ವಿಚಾರಣೆಗೆ ಗುರಿಪಡಿಸಲಾಗುತ್ತದೆ ಎಂದು ತಿಳಿದು ಬಂದಿದೆ. ವಿಚಾರಣೆ ಬಳಿಕ ಹೃಷಿಕೇಶ್ ಅವರನ್ನೂ ಬಂಧಿಸಬೇಕೇ ಅಥವಾ ಬೇಡವೇ ಎಂಬ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮೂಲಗಳು ಸ್ಪಷ್ಟಪಡಿಸಿವೆ.







