ಹಿರಿಯ ತೃಣಮೂಲ ನಾಯಕ, ಪಶ್ಚಿಮ ಬಂಗಾಳ ಸಚಿವ ಸುಬ್ರತಾ ಮುಖರ್ಜಿ ನಿಧನ

ಸುಬ್ರತಾ ಮುಖರ್ಜಿ (Photo: Twitter/@Zee24Ghanta)
ಕೊಲ್ಕತ್ತಾ: ಹಿರಿಯ ತೃಣಮೂಲ ಕಾಂಗ್ರೆಸ್ ನಾಯಕ ಹಾಗೂ ಪಶ್ಚಿಮ ಬಂಗಾಳ ಪಂಚಾಯತ್ ಸಚಿವ ಸುಬ್ರತಾ ಮುಖರ್ಜಿ ಅವರು ಗುರುವಾರ ತಾವು ಚಿಕಿತ್ಸೆ ಪಡೆಯುತ್ತಿದ್ದ ಕೊಲ್ಕತ್ತಾದ ಸರ್ಕಾರಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. 75 ವರ್ಷದ ಮುಖರ್ಜಿ ಅವರು ತಮ್ಮ ಪತ್ನಿಯನ್ನು ಅಗಲಿದ್ದಾರೆ.
ಕೆಲ ದಿನಗಳ ಹಿಂದೆಯಷ್ಟೇ ಮುಖರ್ಜಿ ಅವರು ಆಂಜಿಯೋಪ್ಲಾಸ್ಟಿ ಪ್ರಕ್ರಿಯೆಗೊಳಗಾಗಿದ್ದರು. ಉಸಿರಾಟದ ಸಮಸ್ಯೆಯಿಂದ ಅವರನ್ನು ಅಕ್ಟೋಬರ್ 24ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ನವೆಂಬರ್ 1ರಂದು ಅವರಿಗೆ ಎರಡು ಸ್ಟೆಂಟ್ಗಳನ್ನು ಅಳವಡಿಸಲಾಗಿತ್ತು. ಸಚಿವರಿಗೆ ಅಧಿಕ ರಕ್ತದೊತ್ತಡ, ಸಿಒಪಿಡಿ ಮತ್ತಿತರ ವಯೋಸಹಜ ಆರೋಗ್ಯ ಸಮಸ್ಯೆಗಳಿದ್ದವು.
ಮುಖರ್ಜಿ ಅವರ ನಿಧನ ತಮ್ಮ ಪಕ್ಷಕ್ಕೆ ದೊಡ್ಡ ಹೊಡೆತ ಹಾಗೂ ತಮಗೆ ವೈಯಕ್ತಿಕ ನಷ್ಟ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಮುಖರ್ಜಿ ಅವರ ಪಾರ್ಥಿವ ಶರೀರವನ್ನು ಇಂದು ಸಾರ್ವಜನಿಕರ ದರ್ಶನಕ್ಕಾಗಿ ರಬೀಂದ್ರ ಸದನ್ದಲ್ಲಿಡಲಾಗುವುದು. ನಂತರ ಅಲ್ಲಿಂದ ಅವರ ಪೂರ್ವಜರ ಮನೆಯಿರುವ ಬಲ್ಲಿಗುಂಗೆ ಎಂಬಲ್ಲಿಗೆ ತೆಗೆದುಕೊಂಡು ಹೋಗಲಾಗುವುದು.
ನಾರದಾ ಹಗರಣ ಸಂಬಂಧ ಬಂಧಿತರಾಗಿದ್ದ ಸಂದರ್ಭ ಮೇ ತಿಂಗಳಿನಲ್ಲಿಯೂ ಮುಖರ್ಜಿ ಆರೋಗ್ಯ ಸಮಸ್ಯೆಗೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರು ಕೊಲ್ಕತ್ತಾದ ಮಾಜಿ ಮೇಯರ್ ಕೂಡ ಆಗಿದ್ದರು.







