ದೀಪಾವಳಿ ಆಚರಣೆ ಬಳಿಕ ದೆಹಲಿ ವಾಯು ಗುಣಮಟ್ಟ ಅಪಾಯಕಾರಿ ಹಂತಕ್ಕೆ: ವರದಿ
'ಹಲವು ಮಂದಿಯಲ್ಲಿ ಗಂಟಲು ಕೆರೆತ, ಕಣ್ಣಿನಲ್ಲಿ ನೀರು ಬರುವಂಥ ಸಮಸ್ಯೆ'

ಫೈಲ್ ಫೋಟೊ
ಹೊಸದಿಲ್ಲಿ: ದೀಪಾವಳಿ ಆಚರಣೆ ಹಿನ್ನೆಲೆಯಲ್ಲಿ ಶುಕ್ರವಾರ ಮುಂಜಾನೆ ದೆಹಲಿ ಜನಪಥ್ ವಾಯು ಗುಣಮಟ್ಟ ಅಪಾಯಕಾರಿ ಹಂತಕ್ಕೆ ಕುಸಿದಿದೆ. ಮಾಲಿನ್ಯ ಮೀಟರ್ (ಪಿಎಂ) 2.5 ಇಂದು ಬೆಳಗ್ಗೆ ಜನಪಥ್ನಲ್ಲಿ 655.07ರಷ್ಟಿತ್ತು.
ದೆಹಲಿಯಾದ್ಯಂತ ಆಗಸದಲ್ಲಿ ದಟ್ಟ ಹೊಗೆ ಮಿಶ್ರಿತ ದೂಳಿನ ಹೊದಿಕೆ ಆವರಿಸಿದ್ದು, ಈ ಪ್ರದೇಶದ ಹಲವು ಮಂದಿಯಲ್ಲಿ ಗಂಟಲು ಕೆರೆತ ಹಾಗೂ ಕಣ್ಣಿನಲ್ಲಿ ನೀರು ಬರುವಂಥ ಸಮಸ್ಯೆಗಳು ಕಾಣಿಸಿಕೊಂಡಿವೆ.
ದೆಹಲಿ ಸರ್ಕಾರ ಪಟಾಕಿಗಳ ಮಾರಾಟ ಹಾಗೂ ಬಳಕೆಯನ್ನು ನಿಷೇಧಿಸಿದ್ದರೂ, ದೀಪಾವಳಿ ಸಂದರ್ಭದಲ್ಲಿ ಹಲವು ಮಂದಿ ಬೀದಿಗಳಲ್ಲಿ ಪಟಾಕಿಗಳನ್ನು ಸಿಡಿಸುತ್ತಿದ್ದುದು ಕಂಡುಬಂತು. ಇದು ಈಗಾಗಲೇ ಕುಸಿದಿರುವ ವಾಯು ಗುಣಮಟ್ಟ ಮತ್ತಷ್ಟು ಕಳಪೆಯಾಗಲು ಗಣನೀಯ ಕೊಡುಗೆ ನೀಡಿದೆ ಎಂದು ವರದಿಯಾಗಿದೆ.
ಕೇಂದ್ರ ಸರ್ಕಾರದ ವಾಯು ಗುಣಮಟ್ಟ ಮತ್ತು ಹವಾಮಾನ ಮುನ್ಸೂಚನೆ ಮತ್ತು ಸಂಶೋಧನಾ ವ್ಯವಸ್ಥೆ (ಎಸ್ಎಎಫ್ಎಆರ್) ಅಂದಾಜಿನ ಪ್ರಕಾರ, ರವಿವಾರ ಸಂಜೆವರೆಗೆ ವಾಯು ಗುಣಮಟ್ಟ ಸುಧಾರಿಸುವ ಯಾವುದೇ ಲಕ್ಷಣ ಇಲ್ಲ. ಆದರೆ ತೀರಾ ಕಳಪೆ ಮಟ್ಟದಲ್ಲೇ ವ್ಯತ್ಯಯ ಕಂಡುಬರುವ ನಿರೀಕ್ಷೆ ಇದೆ.
"ದೆಹಲಿಯಲ್ಲಿ ಒಟ್ಟಾರೆ ವಾಯು ಗುಣಮಟ್ಟ ತೀರಾ ಕಳಪೆ ಗುಣಮಟ್ಟದ ವರ್ಗಕ್ಕೆ ಜಾರಿದೆ. ಇದು ಮತ್ತಷ್ಟು ಕುಸಿಯುವ ಅಪಾಯ ಇದ್ದು, ಇದು ಶುಕ್ರವಾರ ರಾತ್ರಿ ವೇಳೆಗೆ ತೀವ್ರ ಕಳಪೆ ಗುಣಮಟ್ಟಕ್ಕೆ ಕುಸಿಯಲಿದೆ. ಕಳೆದ ವರ್ಷ ಸಿಡಿಸಿದ ಪಟಾಕಿಯ ಅರ್ಧದಷ್ಟು ಪಟಾಕಿ ಸಿಡಿಸಿದರೂ, ಮಧ್ಯರಾತ್ರಿ ವೇಳೆಗೆ ವಾಯು ಗುಣಮಟ್ಟ ತೀವ್ರ ಹಂತವನ್ನು ತಲುಪಲಿದೆ. ವಾಯು ಗುಣಮಟ್ಟ ಸೂಚ್ಯಂಕ 500ನ್ನು ದಾಟುವ ನಿರೀಕ್ಷೆ ಇದೆ ಎಂದು ಎಚ್ಚರಿಕೆ ನೀಡಿದೆ.