ಅಮೆಝಾನ್ನಲ್ಲಿ ಪಾಸ್ಪೋರ್ಟ್ ಕವರ್ ಆರ್ಡರ್ ಮಾಡಿದ ವ್ಯಕ್ತಿಗೆ ಕವರ್ ಜತೆಗೆ ಒರಿಜಿನಲ್ ಪಾಸ್ಪೋರ್ಟ್!

ಸಾಂದರ್ಭಿಕ ಚಿತ್ರ (PTI)
ತಿರುವನಂತಪುರ: ಅಮೆಝಾನ್ ಮೂಲಕ ಕಳೆದ ವರ್ಷ ಐಫೋನ್ ಒಂದನ್ನು ಆರ್ಡರ್ ಮಾಡಿದ್ದ ಕೇರಳದ ವ್ಯಕ್ತಿಗೆ ಫೋನ್ ಬದಲು ಪಾತ್ರೆ ತೊಳೆಯುವ ಸೋಪ್ ಹಾಗೂ 5 ರೂಪಾಯಿ ನಾಣ್ಯ ದೊರಕಿದ್ದರೆ, ಇತ್ತೀಚೆಗೆ ಪಾಸ್ಪೋರ್ಟ್ ಕವರ್ ಆರ್ಡರ್ ಮಾಡಿದ್ದ ವಯನಾಡ್ ಜಿಲ್ಲೆಯ ಕನಿಯಂಬೆಟ್ಟ ಎಂಬಲ್ಲಿನ ಮಿಥುನ್ ಬಾಬು ಅವರಿಗೆ ಪಾಸ್ಪೋರ್ಟ್ ಕವರ್ ಜೊತೆಗೆ ಒಂದು ಒರಿಜಿನಲ್ ಪಾಸ್ಪೋರ್ಟ್ ಕೂಡ ದೊರೆತು ಅಚ್ಚರಿ ಮೂಡಿಸಿತು.
ನವೆಂಬರ್ 1ರಂದು ತಮಗೆ ಪಾಸ್ಪೋರ್ಟ್ ಕವರ್ ಜತೆಗೆ ಬೇರೆ ಯಾರದ್ದೋ ಒರಿಜಿನಲ್ ಪಾಸ್ಪೋರ್ಟ್ ದೊರಕಿದ ಕೂಡಲೇ ಮಿಥುನ್ ಅವರು ಅಮೆಝಾನ್ ಕಸ್ಟಮರ್ ಕೇರ್ ಅನ್ನು ಸಂಪರ್ಕಿಸಿದಾಗ. ಇಂತಹ ತಪ್ಪು ಮುಂದೆ ನಡೆಯದಂತೆ ಮಾರಾಟಗಾರರಿಗೆ ತಿಳಿಸುವುದಾಗಿ ಅತ್ತ ಕಡೆಯಿಂದ ಉತ್ತರ ದೊರಕಿತ್ತು. ಆದರೆ ಒರಿಜಿನಲ್ ಪಾಸ್ಪೋರ್ಟ್ ಅನ್ನು ಏನು ಮಾಡಬೇಕೆಂಬುದಕ್ಕೆ ಯಾವುದೇ ಉತ್ತರ ದೊರಕಿರಲಿಲ್ಲ ಎಂದು ತಿಳಿದು ಬಂದಿದೆ.
ಪಾಸ್ಪೋರ್ಟ್ ನಲ್ಲಿನ ವಿವರಗಳ ಪ್ರಕಾರ ಅದು ಮುಹಮ್ಮದ್ ಸಲೀಹ್ ಎಂಬ ತ್ರಿಶ್ಶೂರಿನ ವ್ಯಕ್ತಿಗೆ ಸೇರಿದ್ದಾಗಿತ್ತು. ಅದರಲ್ಲಿ ಅವರ ಫೋನ್ ಸಂಖ್ಯೆ ಇಲ್ಲದೇ ಇದ್ದುದರಿಂದ ಅವರನ್ನು ಸಂಪರ್ಕಿಸುವುದು ಅಸಾಧ್ಯವಾಗಿತ್ತು. ಆದರೆ ಮಿಥುನ್ ಅವರು ಶ್ರಮ ಪಟ್ಟು ಮಾಲಕರನ್ನು ಪತ್ತೆ ಹಚ್ಚಿದ್ದರು.
ಮುಹಮ್ಮದ್ ಅವರು ಮೊದಲು ಪಾಸ್ಪೋರ್ಟ್ ಕವರ್ ಆರ್ಡರ್ ಮಾಡಿರಬಹುದು, ಆದರೆ ತಮಗೆ ದೊರೆತ ಕವರಿನೊಳಗೆ ಪಾಸ್ಪೋರ್ಟ್ ಇರಿಸಿದಾಗ ಅದು ಸರಿಯಾಗಿಲ್ಲವೆಂದು ಅವರು ಪಾಸ್ಪೋರ್ಟ್ ತೆಗೆಯದೆಯೇ ಕವರನ್ನು ವಾಪಸ್ ನೀಡಿದ್ದಿರಬಹುದು, ಮಿಥುನ್ ಆರ್ಡರ್ ಮಾಡಿದಾಗ ಮಾರಾಟಗಾರರು ಸರಿಯಾಗಿ ತಪಾಸಿಸದೆ ಅದೇ ಕವರನ್ನು ಅವರಿಗೆ ಕಳುಹಿಸಿರಬೇಕೆಂದು ಊಹಿಸಲಾಗಿದೆ.