ಸ್ಕೂಟರ್ ನಲ್ಲಿ ದೀಪಾವಳಿಗೆಂದು ಪಟಾಕಿ ಸಾಗಿಸುತ್ತಿದ್ದಾಗ ಸ್ಫೋಟಗೊಂಡು ಅಪ್ಪ-ಮಗ ಬಲಿ

ಚೆನ್ನೈ: ತಮ್ಮ ದ್ವಿಚಕ್ರವಾಹನದಲ್ಲಿ ಸಾಗಿಸುತ್ತಿದ್ದ ಪಟಾಕಿಗಳು ಸ್ಫೋಟಗೊಂಡ ಪರಿಣಾಮ ತಂದೆ ಹಾಗೂ ಮಗ ಜೀವಂತ ದಹಿಸಿ ಹೋದ ಘಟನೆ ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯಲ್ಲಿ ಗುರುವಾರ ಸಂಭವಿಸಿದೆ. ಈ ದುರಂತದ ಸೀಸಿಟಿವಿ ದೃಶ್ಯ ವೈರಲ್ ಆಗಿದೆ.
ದ್ವಿಚಕ್ರವಾಹನವೊಂದು ಪೊಲೀಸ್ ಬ್ಯಾರಿಕೇಡ್ ಒಂದನ್ನು ದಾಟಿ ಮುಂದಕ್ಕೆ ಸಾಗುತ್ತಿದ್ದಂತೆಯೇ ಅದಕ್ಕೆ ಬೆಂಕಿ ಹತ್ತಿಕೊಳ್ಳುವುದು ಕಾಣಿಸುತ್ತದೆ. ಇದೇ ಸಂದರ್ಭ ವಿರುದ್ಧ ದಿಕ್ಕಿನಿಂದ ರಾಂಗ್ ಸೈಡ್‍ನಲ್ಲಿ ಆಗಮಿಸುತ್ತಿದ್ದ ದ್ವಿಚಕ್ರ ವಾಹನ ಸವಾರರೊಬ್ಬರು ತಮ್ಮ ವಾಹನದ ಮೇಲೆ ನಿಯಂತ್ರಣ ಕಳೆದುಕೊಂಡು ಬೀಳುವ ದೃಶ್ಯವೂ ಇದೆ.
ದ್ವಿಚಕ್ರವಾಹನದ ಎದುರು ಭಾಗದಲ್ಲಿ ಪಟಾಕಿಗಳ ಎರಡು ಕಟ್ಟುಗಳನ್ನು ಇಡಲಾಗಿತ್ತು ಹಾಗೂ ಬಾಲಕ ಅದರ ಮೇಲೆ ಕುಳಿತುಕೊಂಡಿದ್ದ. ಎದುರುಗಡೆಯಿಂದ ಆಗಿ ಎರಡು ವಾಹನಗಳು ಆಗಮಿಸಿದ್ದರಿಂದ ದಿಢೀರ್ ಆಗಿ ಬ್ರೇಕ್ ಹಾಕಿದಾಗ ಈ ದುರ್ಘಟನೆ ಸಂಭವಿಸಿರಬಹುದೆಂದು ಹೇಳಲಾಗಿದೆ. ಮೃತರನ್ನು ಕಲೈನೀಸನ್ (35) ಮತ್ತವರ ಪುತ್ರ ಪ್ರದೇಶ್ (7) ಎಂದು ಗುರುತಿಸಲಾಗಿದೆ. ಅವರು ನೆರೆಯ ಪುದುಚ್ಚೇರಿಯಲ್ಲಿ ಪಟಾಕಿ ಖರೀದಿಸಿ ಕಲೈನೀಸನ್ ಅವರ ಅತ್ತೆ ಮನೆಯಲ್ಲಿ ದೀಪಾವಳಿಯನ್ನು ಸಡಗರದಿಂದ ಆಚರಿಸಲೆಂದು ತೆರಳುತ್ತಿದ್ದಾಗ ಈ ದುರಂತ ಸಂಭವಿಸಿದೆ.
ಎದುರುಗಡೆಯಿಂದ ಬರುತ್ತಿದ್ದ ವಾಹನಗಳಲ್ಲಿದ್ದ ಮೂವರು ಕೂಡ ಗಾಯಗೊಂಡಿದ್ದಾರೆ.
A father-son duo was killed and three others were injured when a bag of country fireworks they were carrying in their motorcycle exploded accidentally at Kottakuppam town on Thursday afternoon. pic.twitter.com/VknP6ebDU4
— Express Chennai (@ie_chennai) November 5, 2021







