ಹರ್ಯಾಣ: ಮಾಜಿ ಸಚಿವ ಒಳಗಿರುವಂತೆಯೇ ದೇವಸ್ಥಾನವನ್ನು ಸುತ್ತುವರೆದ ರೈತರು

Photo: NDTV
ಗುರ್ಗಾಂವ್: ಪ್ರಧಾನಿ ನರೇಂದ್ರ ಮೋದಿಯವರು ಕೇದಾರನಾಥ ದೇಗುಲಕ್ಕೆ ಭೇಟಿ ನೀಡಿದ್ದು, ಈ ಕಾರ್ಯಕ್ರಮದ ನೇರಪ್ರಸಾರವನ್ನು ಹರ್ಯಾಣದ ದೇವಸ್ಥಾನವೊಂದರಲ್ಲಿ ವೀಕ್ಷಿಸುತ್ತಿದ್ದ ಬಿಜೆಪಿ ನಾಯಕರನ್ನು ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರು ಸುತ್ತುವರಿದಿದ್ದಾರೆ ಎಂದು ndtv.com ವರದಿ ಮಾಡಿದೆ.
ಸುತ್ತುವರಿದಿರುವ ರೈತರನ್ನು ನಿಯಂತ್ರಿಸಲು ಪೊಲೀಸರು ಪ್ರಯತ್ನಿಸಿದರೂ ಕಳೆದ ಆರು ಗಂಟೆಗಳಿಂದ ಮಾಜಿ ಸಾಸಕ ಮನೀಶ್ ಗ್ರೋವರ್ ಹಾಗೂ ಇನ್ನಿತರರನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ರೈತರ ವಿರುದ್ಧ ಆಕ್ಷೇಪಾರ್ಹ ಭಾಷೆಯನ್ನು ಬಳಸಿದ್ದಕ್ಕಾಗಿ ಮಾಜಿ ಸಚಿವ ಕ್ಷಮೆ ಯಾಚಿಸಬೇಕು ಎಂದು ರೈತರು ಪಟ್ಟು ಹಿಡಿದಿದ್ದಾರೆ.
ರೋಹ್ಟಕ್ ಜಿಲ್ಲೆಯಲ್ಲಿರುವ ಕಿಲೋಯಿ ಗ್ರಾಮದಲ್ಲಿರುವ ದೇವಸ್ಥಾನದ ಕಡೆಗೆ ಇತರ ಜಿಲ್ಲೆಗಳಿಂದಲೂ ಪೊಲೀಸ್ ಪಡೆಗಳನ್ನು ಕರೆತರಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಪ್ರತಿಭಟನಾಕಾರರನ್ನು ಬಂಧಿಸಲಾಗಿದ್ದು, ದಿಲ್ಲಿ-ಹಿಸಾರ್ ರಾಷ್ಟ್ರೀಯ ಹೆದ್ದಾರಿಯನ್ನು ಮುಚ್ಚಲಾಗಿದೆ ಎಂದು ತಿಳಿಸಿದ್ದಾರೆ.
ಈ ಮಧ್ಯೆ, ಎಲ್ಲಾ ಕಡೆಯಿಂದ ದೇವಸ್ಥಾನವನ್ನು ಸುತ್ತುವರಿಯುವಂತೆ ರೈತರು ನೆರೆದಿದ್ದ ಜನರನ್ನು ಕೇಳಿಕೊಂಡಿದ್ದಾರೆಂದು ವರದಿ ತಿಳಿಸಿದೆ. ಸೋನಿಪತ್ ಮತ್ತು ಝಜ್ಜರ್ನ ಪೊಲೀಸರು ಕೂಡ ಪ್ರದೇಶವನ್ನು ತಲುಪಿದ್ದಾರೆ ಮತ್ತು ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸಿದ್ಧರಾಗಿರಲು ಅವರಿಗೆ ಸೂಚನೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.