ಗ್ಯಾಸ್, ಅಡುಗೆ ಎಣ್ಣೆ ದರ ಇಳಿಸದಿದ್ದರೆ ಮುಂಬರುವ ಚುನಾವಣೆಗಳಲ್ಲೂ ಬಿಜೆಪಿಗೆ ಸೋಲಾಗಲಿದೆ: ಡಿ.ಕೆ ಶಿವಕುಮಾರ್

ಹುಬ್ಬಳ್ಳಿ: ಮತದಾರರ ಉತ್ತರ ನೋಡಿ ಪ್ರಧಾನಿ ಮೋದಿ, ಮುಖ್ಯಮಂತ್ರಿ ಬೊಮ್ಮಾಯಿ ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆ ಮಾಡಿದ್ದಾರೆ. ಅವರಿಗೆ ಈಗ ತಿಳುವಳಿಕೆ ಬಂದಿದ್ದು, ಇನ್ನು ಗ್ಯಾಸ್, ಕಬ್ಬಿಣ, ಸಿಮೆಂಟ್, ದಿನಬಳಕೆ ವಸ್ತು ಹಾಗೂ ಅಡುಗೆ ಎಣ್ಣೆ ಬೆಲೆ ಇಳಿಸದಿದ್ದರೆ, ಮುಂಬರುವ ಚುನಾವಣೆಗಳಲ್ಲೂ ಮತದಾರರಿಂದ ಇದೇ ಉತ್ತರ ಬರಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಹಾನಗಲ್ ವಿಧಾನಸಭಾ ಕ್ಷೇತ್ರದ ಶಿಗ್ಗಾವಿಯಲ್ಲಿ ನಡೆದ ಸಾರ್ವಜನಿಕ ರ್‍ಯಾಲಿ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಮಗೆ ಮತದಾರರ ಮೇಲೆ ಸಂಪೂರ್ಣ ನಂಬಿಕೆ ಇತ್ತು. ಸರಕಾರ ನಿತ್ಯ ಜನರ ಜೇಬನ್ನು ಪಿಕ್ ಪಾಕೆಟ್ ಮಾಡುತ್ತಿತ್ತು. ಹೆಣ್ಣು ಮಕ್ಕಳು ಕಣ್ಣೀರು ಹಾಕುತ್ತಿದ್ದರು. ರೈತರು ಬಳಲಿದ್ದರು. ಕಾರ್ಮಿಕರು, ಬೀದಿ ವ್ಯಾಪಾರಿಗಳು ಪರಿಹಾರಕ್ಕೆ ಕಾದು ಕುಳಿತಿದ್ದರು. ಆದರೆ ಇದ್ಯಾವುದೂ ಜನರಿಗೆ ತಲುಪಲಿಲ್ಲ. ನಾನು ಪ್ರಚಾರದ ವೇಳೆ ಯಾವುದೇ ಬೋಧನೆ ಮಾಡಲಿಲ್ಲ. ಮತದಾರರಿಗೆ ಈ ವಿಚಾರವಾಗಿ ಕೆಲವು ಪ್ರಶ್ನೆ ಕೇಳಿದೆ. ಪರಿಹಾರ ತಲುಪಿದೆಯಾ? ಸರ್ಕಾರದಿಂದ ಸಹಾಯವಾಗಿದೆಯಾ, ಇಲ್ಲವಾ? ನಿಮ್ಮ ಜೀವನದಲ್ಲಿ ಬದಲಾವಣೆ ಆಗಿದೆಯಾ ಇಲ್ಲವಾ? ರೈತರ ಆದಾಯ ಡಬಲ್ ಆಗಿದೆಯಾ? ಎಂದು ಕೇಳಿದಾಗ ಅವರು ಇಲ್ಲ ಎಂದರು. ಇದಕ್ಕೆ ಉತ್ತರ ಕೊಡಬೇಕಲ್ಲವೇ ಎಂದು ಕೇಳಿದ್ದೆ. ಅವರು ಈಗ ಉತ್ತರ ಕೊಟ್ಟಿದ್ದಾರೆ ಎಂದರು.





