ಜಲವಿದ್ಯುತ್ ಯೋಜನೆಗೆ ಮುಂದಾದ ಕೊಚ್ಚಿನ್ ವಿಮಾನ ನಿಲ್ದಾಣ

ಕೊಚ್ಚಿನ್ : ವಿಶ್ವದ ಮೊಟ್ಟಮೊದಲ ಸೌರ ವಿದ್ಯುತ್ ಚಾಲಿತ ವಿಮಾನ ನಿಲ್ದಾಣ ಎನಿಸಿದ ಕೊಚ್ಚಿನ್ ಇಂಟರ್ ನ್ಯಾಷನಲ್ ಏರ್‌ಪೋರ್ಟ್ ಲಿಮಿಟೆಡ್ (ಸಿಐಎಎಲ್) ಶನಿವಾರ ತನ್ನದೇ ಆದ ಜಲವಿದ್ಯುತ್ ಯೋಜನೆಗೆ ಚಾಲನೆ ನೀಡಲಿದೆ.
ಈ ಮೂಲಕ ಸುಸ್ಥಿರ ಇಂಧನ ಮೂಲದ ವಿದ್ಯುತ್ ಉತ್ಪಾದನೆಯಲ್ಲಿ ಆದ್ಯ ಪ್ರವರ್ತಕ ಎನಿಸಲಿದೆ. ಈ ಜಲವಿದ್ಯುತ್ ಘಟಕ ಆರಂಭಿಸಿದ ಬಳಿಕ ಸಿಐಎಎಲ್, ಕೋಝಿಕ್ಕೋಡ್ ಸಮೀಪದ ಅರಿಪ್ಪರ ಘಟಕದಿಂದ ಕೆಎಸ್‌ಇಬಿ ಗ್ರಿಡ್‌ಗೆ ವಿದ್ಯುತ್ ಪೂರೈಸಲಿದೆ.
ಈ ಜಲವಿದ್ಯುತ್ ಘಟಕ ವಾರ್ಷಿಕ 14 ಲಕ್ಷ ಯೂನಿಟ್ ವಿದ್ಯುತ್ ಉತ್ಪಾದಿಸಲಿದ್ದು, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಘಟಕವನ್ನು ಉದ್ಘಾಟಿಸಲಿದ್ದಾರೆ.
ಸಿಐಎಎಲ್ ಪ್ರಕಾರ ಈ ಜಲವಿದ್ಯುತ್ ಯೋಜನೆಯು ಹರಿಯುವ ನೀರಿನ ಯೋಜನೆಯಾಗಿದ್ದು, ನೈಸರ್ಗಿಕವಾಗಿ ಕೆಳಮುಖ ಹರಿಯುವ ನದಿಗಳು ಮತ್ತು ಮೈಕ್ರೊಟರ್ಬೈನ್ ಜನರೇಟರ್‌ಗಳನ್ನು ಅವಲಂಬಿಸಿದ್ದು, ಈ ಜನರೇಟರ್‌ಗಳು ನೀರಿನ ಕೈನೆಟಿಕ್ ಶಕ್ತಿಯನ್ನು ಸೆರೆಹಿಡಿಯುತ್ತವೆ. ಸಿಐಎಲ್, ಇರುವಳಿಂಜಿ ನದಿಗೆ ಪುಟ್ಟ ಅಣೆಕಟ್ಟು ನಿರ್ಮಿಸಿದ್ದು, ಹೈಡ್ರೊ ಮೆಕ್ಯಾನಿಕಲ್ ಮತ್ತು ಎಲೆಕ್ಟ್ರೊ ಮೆಕ್ಯಾನಿಕಲ್ ಸಿಸ್ಟಂ ಅನ್ನು ಕೊಡಂಚೇರಿ ಸಮೀಪದ ಅರಿಪ್ಪರ ಎಂಬಲ್ಲಿ ವ್ಯವಸ್ಥೆಗೊಳಿಸಿದೆ.
ಇದು ಹರಿಯುವ ನೀರಿನ ಯೋಜನೆಯಾಗಿ, ಸಿಐಎಎಲ್ ಸಣ್ಣ ಜಲವಿದ್ಯುತ್ ಘಟಕವು ಸೀಮಿತ ನೀರಿನ ಲಭ್ಯತೆಯಲ್ಲಿ ಕಾರ್ಯ ನಿರ್ವಹಿಸಲಿದ್ದು, ಇದರಿಂದಾಗಿ ಪರಿಸರಕ್ಕೆ ಯಾವುದೇ ವ್ಯತಿರಿಕ್ತ ಪರಿಣಾಮ ಇಲ್ಲ ಎಂದು ಅಧಿಕೃತ ಪ್ರಕಟಣೆ ಹೇಳಿದೆ.