ಮುಕೇಶ್ ಅಂಬಾನಿ ಕುಟುಂಬಕ್ಕೆ ಲಂಡನ್ಗೆ ಸ್ಥಳಾಂತರಗೊಳ್ಳುವ ಉದ್ದೇಶವಿಲ್ಲ: ರಿಲಯನ್ಸ್ ಗ್ರೂಪ್ ಸ್ಪಷ್ಟೀಕರಣ

ಮುಕೇಶ್ ಅಂಬಾನಿ (File Photo: PTI)
ಹೊಸದಿಲ್ಲಿ: ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಮತ್ತವರ ಕುಟುಂಬ ಲಂಡನ್ನಲ್ಲಿ ತಾವು ಖರೀದಿಸಿರುವ 300 ಎಕರೆ ವಿಸ್ತೀರ್ಣದ ಸ್ಟೋಕ್ ಪಾರ್ಕ್ ಎಸ್ಟೇಟ್ಗೆ ಸ್ಥಳಾಂತರಗೊಳ್ಳಲಿದ್ದಾರೆಂಬ ಸುದ್ದಿಗಳ ಹಿನ್ನೆಲೆಯಲ್ಲಿ ಶುಕ್ರವಾರ ಸ್ಪಷ್ಟೀಕರಣ ನೀಡಿರುವ ರಿಲಯನ್ಸ್ ಗ್ರೂಪ್, ವರದಿಗಳನ್ನು 'ನಿರಾಧಾರ' ಎಂದು ಬಣ್ಣಿಸಿ ಅಲ್ಲಗಳೆದಿದೆ.
"ದೈನಿಕವೊಂದರಲ್ಲಿ ಇತ್ತೀಚೆಗೆ ಪ್ರಕಟವಾದ ವರದಿಯು ಸಾಮಾಜಿಕ ಜಾಲತಾಣಗಳಲ್ಲಿ ಆಧಾರರಹಿತ ಊಹಾಪೋಹಗಳಿಗೆ ಕಾರಣವಾಗಿದೆ ಹಾಗೂ ಅಂಬಾನಿ ಕುಟುಂಬವು ಮುಂಬೈ ಹೊರತಾಗಿ ಲಂಡನ್ನ ಸ್ಟೋಕ್ ಪಾರ್ಕ್ನಲ್ಲಿಯೂ ನೆಲೆಸಲಿದೆ ಎಂಬ ಸುದ್ದಿ ಹರಡಿದೆ,'' ಎಂದು ಹೇಳಿಕೆ ತಿಳಿಸಿದೆ.
"ಮುಕೇಶ್ ಅಂಬಾನಿ ಮತ್ತವರ ಕುಟುಂಬಕ್ಕೆ ಬೇರೆ ಕಡೆ ವಾಸಿಸುವ ಅಥವಾ ಲಂಡನ್ಗೆ ಸ್ಥಳಾಂತರಗೊಳ್ಳುವ ಯಾ ಜಗತ್ತಿನ ಯಾವುದೇ ಭಾಗದಲ್ಲಿ ವಾಸಿಸುವ ಉದ್ದೇಶವಿಲ್ಲ,'' ಎಂದೂ ರಿಲಯನ್ಸ್ ಗ್ರೂಪ್ ತಿಳಿಸಿದೆ.
ಸ್ಟೋಕ್ ಪಾರ್ಕ್ ಎಸ್ಟೇಟ್ ಅನ್ನು ರಿಲಯನ್ಸ್ ಇಂಡಸ್ಟ್ರಿಯಲ್ ಇನ್ವೆಸ್ಟ್ಮೆಂಟ್ಸ್ ಹೋಲ್ಡಿಂಗ್ಸ್ ಲಿಮಿಟೆಡ್ ಇತ್ತೀಚೆಗೆ ಖರೀದಿಸಿರುವುದನ್ನು ಉಲ್ಲೇಖಿಸಿದ ಹೇಳಿಕೆ, "ಈ ಪಾರಂಪರಿಕ ತಾಣವನ್ನು ಒಂದು ಉನ್ನತ ಗೋಲ್ಫ್ ಮತ್ತು ಸ್ಪೋರ್ಟ್ಸ್ ರಿಸಾರ್ಟ್ ಆಗಿ ಅಲ್ಲಿನ ಸ್ಥಳೀಯ ನಿಯಮಗಳಿಗೆ ಬದ್ಧವಾಗಿ ಅಭಿವೃದ್ಧಿಪಡಿಸಲಾಗುವುದು,'' ಎಂದು ತಿಳಿಸಿದೆ.