ವಾಂಖೆಡೆ ವಿರುದ್ಧ ಲಂಚ ಆರೋಪ: ನವಾಬ್ ಮಲಿಕ್ ಅಳಿಯನ ಜಾಮೀನು ರದ್ದುಗೊಳಿಸಲು ಕೋರ್ಟ್ ಮೊರೆ ಹೋಗಲಿರುವ ಎಸ್‍ಐಟಿ?
ಮುಂಬೈ: ಆರ್ಯನ್ ಖಾನ್ ಪ್ರಕರಣದ ತನಿಖೆ ನಡೆಸುತ್ತಿದ್ದ ಮುಂಬೈಯ ಎನ್‍ಸಿಬಿ ವಲಯ ನಿರ್ದೇಶಕ ಸಮೀರ್ ವಾಂಖೇಡೆ ವಿರುದ್ಧ ಗಂಭೀರ ಲಂಚ ಆರೋಪಗಳ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಅವರ ಅಳಿಯನಿಗೆ ಸಂಬಂಧಿಸಿದ ಪ್ರಕರಣ ಸಹಿತ ಆರು ಪ್ರಕರಣಗಳನ್ನು ಮುಂಬೈ ಎನ್‍ಸಿಬಿಯಿಂದ ಹಿರಿಯ ಪೊಲೀಸ್ ಅಧಿಕಾರಿ ಸಂಜಯ್ ಸಿಂಗ್ ನೇತೃತ್ವದ ವಿಶೇಷ ತನಿಖಾ ತಂಡಕ್ಕೆ ಹಸ್ತಾಂತರಿಸಲಾಗಿದೆ.
ಸಚಿವ ನವಾಬ್ ಮಲಿಕ್ ಅವರ ಅಳಿಯ ಸಮೀರ್ ಖಾನ್ ಅವರಿಗೆ ಡ್ರಗ್ಸ್ ಪ್ರಕರಣದಲ್ಲಿ ನೀಡಲಾಗಿರುವ ಜಾಮೀನನ್ನು ರದ್ದುಗೊಳಿಸುವಂತೆ ಕೋರಿ ವಿಶೇಷ ತನಿಖಾ ತಂಡ ನ್ಯಾಯಾಲಯದ ಮೊರೆ ಹೋಗಲಿದೆ ಎಂಬ ಮಾಹಿತಿಯಿದ್ದು ಇದು ಮತ್ತೆ ವಿವಾದಕ್ಕೆಡೆಯಾಗುವ ಸಾಧ್ಯತೆ ಹೆಚ್ಚಾಗಿದೆ ಎಂದು ndtv.com ವರದಿ ಮಾಡಿದೆ. ನವಾಬ್ ಮಲಿಕ್ ಈಗಾಗಲೇ ಆರ್ಯನ್ ಖಾನ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಾಂಖೇಡೆ ವಿರುದ್ಧ ಹಲವು ಸ್ಫೋಟಕ ಆರೋಪಗಳನ್ನು ಮಾಡಿರುವುದನ್ನು ಇಲ್ಲಿ ಉಲ್ಲೇಖಿಸಬಹುದು.
ಇನ್ನೊಂದು ಡ್ರಗ್ಸ್ ಪ್ರಕರಣದ ಆರೋಪಿಯೊಂದಿಗೆ ರೂ 20,000 ಮೊತ್ತದ ವ್ಯವಹಾರಗಳ ಸಾಕ್ಷ್ಯಗಳು ದೊರೆತ ನಂತರ ಎನ್‍ಸಿಬಿ ಸಮೀರ್ ಖಾನ್ ಗೆ ಸಮನ್ಸ್ ಕಳುಹಿಸಿತ್ತು. ಅವರಿಂದ 200 ಕೆಜಿ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ ಎಂದು ಎನ್‍ಸಿಬಿ ಹೇಳಿತ್ತಲ್ಲದೆ ನಂತರ ಅವರನ್ನು ಜನವರಿಯಲ್ಲಿ ಬಂಧಿಸಿತ್ತು. ಆದರೆ ಸಮೀರ್ ಅವರಿಂದ ಹರ್ಬಲ್ ಟೊಬ್ಯಾಕೋ ವಶಪಡಿಸಿಕೊಳ್ಳಲಾಗಿತ್ತು ಎಂದು ನವಾಬ್ ಮಲಿಕ್ ವಾದಿಸಿದ್ದರು. ಸಮೀರ್ ಗೆ ಸೆಪ್ಟೆಂಬರ್ ತಿಂಗಳಿನಲ್ಲಿ ಜಾಮೀನು ದೊರಕಿತ್ತು.