ಮಹಾರಾಷ್ಟ್ರ: ಆಸ್ಪತ್ರೆಯಲ್ಲಿ ಅಗ್ನಿ ಅನಾಹುತಕ್ಕೆ 10 ಮಂದಿ ಬಲಿ
ಅಹ್ಮದ್‌ನಗರ ಆಸ್ಪತ್ರೆಯ ಕೋವಿಡ್ ವಾರ್ಡ್‌ನಲ್ಲಿ ಬೆಂಕಿ ಅವಘಡ,ಕನಿಷ್ಠ 10 ರೋಗಿಗಳ ಮೃತ್ಯು ಅಹ್ಮದ್‌ನಗರ (ಮಹಾರಾಷ್ಟ್ರ),ನ.6: ಇಲ್ಲಿಯ ಸರಕಾರಿ ಆಸ್ಪತ್ರೆಯ ತೀವ್ರ ನಿಗಾ ಘಟಕ (ಐಸಿಯು)ದಲ್ಲಿ ಶನಿವಾರ ಪೂರ್ವಾಹ್ನ 11 ಗಂಟೆಯ ಸುಮಾರಿಗೆ ಭಾರೀ ಬೆಂಕಿ ಅವಘಡ ಸಂಭವಿಸಿದ್ದು,10 ರೋಗಿಗಳು ಮೃತಪಟ್ಟಿದ್ದಾರೆ. ಇನ್ನೋರ್ವ ರೋಗಿಗೆ ಗಂಭೀರ ಸುಟ್ಟ ಗಾಯಗಳಾಗಿವೆ.
17 ರೋಗಿಗಳನ್ನು ದಾಖಲಿಸಲಾಗಿದ್ದ ಆಸ್ಪತ್ರೆಯ ಕೋವಿಡ್ ವಾರ್ಡ್‌ನಲ್ಲಿ ಈ ಬೆಂಕಿ ಅವಘಡ ಸಂಭವಿಸಿದೆ.
ಈ ದುರಂತದ ಬಗ್ಗೆ ತನಿಖೆಗೆ ಆದೇಶಿಸಿರುವ ಮುಖ್ಯಮಂತ್ರಿಉದ್ಧವ ಠಾಕ್ರೆಯವರು ಮೃತರ ಕುಟುಂಬಗಳಿಗೆ ತಲಾ ಐದು ಲ.ರೂ.ಗಳ ಪರಿಹಾರವನ್ನು ಪ್ರಕಟಿಸಿದ್ದಾರೆ.
ಇತರ ರೋಗಿಗಳನ್ನು ಬೇರೊಂದು ಆಸ್ಪತ್ರೆಯ ಕೋವಿಡ್ ವಾರ್ಡ್‌ಗೆ ಸ್ಥಳಾಂತರಿಸಲಾಗಿದೆ. ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಲಾಗಿದ್ದು, ದುರಂತಕ್ಕೆ ಕಾರಣವಿನ್ನೂ ಗೊತ್ತಾಗಿಲ್ಲ. ಅಗ್ನಿಶಾಮಕ ಇಲಾಖೆಯು ನಡೆಸಿರುವ ಪ್ರಾಥಮಿಕ ತನಿಖೆಯು ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಆರಂಭಗೊಂಡಿತ್ತು ಎನ್ನುವುದನ್ನು ಸೂಚಿಸಿದೆ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಭೋಸಲೆ ಅವರು ಸುದ್ದಿಗಾರರಿಗೆ ತಿಳಿಸಿದರು.
ವೈದ್ಯರು ಸಿಬ್ಬಂದಿಗಳು ಮತ್ತು ಸ್ಥಳೀಯರ ನೆರವಿನೊಂದಿಗೆ ಬೆಂಕಿಯಲ್ಲಿ ಸಿಕ್ಕಿಹಾಕಿಕೊಂಡಿದ್ದ ಹಲವಾರು ರೋಗಿಗಳನ್ನು ರಕ್ಷಿಸುವಲ್ಲಿ ಸಫಲರಾಗಿದ್ದಾರೆ.
ಘಟನೆಯ ಬಗ್ಗೆ ಅಧಿಕೃತ ವಿಚಾರಣೆ ನಡೆಯಲಿದೆ ಎಂದು ಹಿರಿಯ ಸರಕಾರಿ ಅಧಿಕಾರಿಯೋರ್ವರು ತಿಳಿಸಿದರು.
ಕೊರೋನವೈರಸ್ ರೋಗಿಗಳಿಗೆ ಚಿಕಿತ್ಸೆ ನೀಡುವ ತುರ್ತು ಉದ್ದೇಶದಿಂದ ಐಸಿಯುವನ್ನು ಹೊಸದಾಗಿ ನಿರ್ಮಿಸಲಾಗಿತ್ತು ಮತ್ತು ಈ ವಿಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಗಂಭೀರ ವಿಷಯವಾಗಿದೆ ಎಂದು ಹೇಳಿದ ಮಹಾರಾಷ್ಟ್ರದ ಸಚಿವ ನವಾಬ್ ಮಲಿಕ್ ಅವರು,ಎಲ್ಲ ಆಸ್ಪತ್ರೆಗಳಿಗೆ ‘ಫೈರ್ ಆಡಿಟ್’ಕೈಗೊಳ್ಳುವಂತೆ ಸೂಚಿಸಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಅಹ್ಮದ್‌ನಗರ ಸರಕಾರಿ ಆಸ್ಪತ್ರೆಯ ವರದಿಯನ್ನು ಪರಿಶೀಲಿಸಲಾಗುವುದು. ಅವಘಡದ ಬಗ್ಗೆ ಸಮಗ್ರ ತನಿಖೆ ನಡೆಯಲಿದೆ ಎಂದು ತಿಳಿಸಿದರು.
ಬೆಂಕಿ ಅವಘಡಕ್ಕೆ ಹೊಣೆಯಾಗಿರುವ ಎಲ್ಲರ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳುವಂತೆ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಅವರು ಟ್ವೀಟ್ ಮೂಲಕ ಆಗ್ರಹಿಸಿದ್ದಾರೆ.
ಅಹ್ಮದ್‌ನಗರದ ಎನ್‌ಸಿಪಿ ಶಾಸಕ ಸಂಗ್ರಾಮ ಜಗತಾಪ್ ಅವರು ದುರಂತದ ಬಗ್ಗೆ ದುಃಖವನ್ನು ವ್ಯಕ್ತಪಡಿಸಿದ್ದಾರೆ.