ಮೇ 2022ರವರೆಗೆ ಉಚಿತ ಪಡಿತರ ಯೋಜನೆ ಮುಂದುವರಿಸಲು ದಿಲ್ಲಿ ಸರಕಾರದ ನಿರ್ಧಾರ

ಹೊಸದಿಲ್ಲಿ,ನ.6: ತನ್ನ ಉಚಿತ ಪಡಿತರ ಯೋಜನೆಯನ್ನು ಇನ್ನೂ ಆರು ತಿಂಗಳ ಕಾಲ ಮೇ 2022ರವರೆಗೆ ಮುಂದುವರಿಸಲು ಆಪ್ ಸರಕಾರವು ನಿರ್ಧರಿಸಿದೆ ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಶನಿವಾರ ತಿಳಿಸಿದ್ದಾರೆ.
‘ಹಣದುಬ್ಬರವು ಉತ್ತುಂಗದಲ್ಲಿದೆ. ಜನರು ದಿನಕ್ಕೆ ಎರಡು ಹೊತ್ತು ಊಟ ಮಾಡಲೂ ಪರದಾಡುತ್ತಿದ್ದಾರೆ. ಕೋವಿಡ್‌ನಿಂದಾಗಿ ಹಲವಾರು ಜನರು ತಮ್ಮ ಉದ್ಯೋಗಗಳನ್ನು ಕಳೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ತನ್ನ ಉಚಿತ ಪಡಿತರ ಯೋಜನೆಯನ್ನು ಇನ್ನೂ ಆರು ತಿಂಗಳು ವಿಸ್ತರಿಸಲು ದಿಲ್ಲಿ ಸರಕಾರವು ನಿರ್ಧರಿಸಿದೆ ’ ಎಂದು ಟ್ವೀಟಿಸಿರುವ ಕೇಜ್ರಿವಾಲ್,ಬಡವರಿಗೆ ಉಚಿತ ಪಡಿತರ ವಿತರಣೆ ಯೋಜನೆಯನ್ನು ಇನ್ನೂ ಆರು ತಿಂಗಳು ವಿಸ್ತರಿಸುವಂತೆ ಪ್ರಧಾನಿ ನರೇಂದ್ರ ಮೋದಿಯವರನ್ನು ಆಗ್ರಹಿಸಿದ್ದಾರೆ.
ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ (ಪಿಎಂಜಿಕೆಎವೈ)ಯ ಮೂಲಕ ಉಚಿತ ಪಡಿತರ ವಿತರಣೆಯನ್ನು ನ.30ರಿಂದಾಚೆಗೆ ವಿಸ್ತರಿಸುವ ಯಾವುದೇ ಪ್ರಸ್ತಾವ ಕೇಂದ್ರದ ಮುಂದಿಲ್ಲ ಎಂದು ಆಹಾರ ಕಾರ್ಯದರ್ಶಿ ಸುಧಾಂಶು ಪಾಂಡೆ ಅವರು ತಿಳಿಸಿದ ಮರುದಿನ ಕೇಜ್ರಿವಾಲ್ ಹೇಳಿಕೆ ಹೊರಬಿದ್ದಿದೆ.
ದಿಲ್ಲಿ ಸರಕಾರವು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ,2013 ಮತ್ತು ಪಿಎಂಜಿಕೆಎವೈ ಅಡಿ ಫಲಾನುಭವಿಗಳಿಗೆ ಉಚಿತ ಪಡಿತರವನ್ನು ವಿತರಿಸುತ್ತಿದೆ.
ದಿಲ್ಲಿಯಲ್ಲಿ 2,000ಕ್ಕೂ ಅಧಿಕ ನ್ಯಾಯಬೆಲೆ ಅಂಗಡಿಗಳಿದ್ದು,17.77 ಲ.ಪಡಿತರ ಚೀಟಿದಾರರು ಮತ್ತು ಸುಮಾರು 72.78 ಲ. ಫಲಾನುಭವಿಗಳಿದ್ದಾರೆ. ನ್ಯಾಯಬೆಲೆ ಅಂಗಡಿಗಳ ಮೂಲಕ ವಿತರಿಸಲಾಗುತ್ತಿರುವ ಸಬ್ಸಿಡಿ ದರಗಳ ಧಾನ್ಯಗಳಿಗೆ ಹೆಚ್ಚುವರಿಯಾಗಿ ಉಚಿತ ಪಡಿತರವನ್ನು ಒದಗಿಸಲಾಗುತ್ತಿದೆ.
ಕೋವಿಡ್‌ನಿಂದ ಉಂಟಾದ ತೊಂದರೆಗಳನ್ನು ತಗ್ಗಿಸಲು ಪಿಎಂಜಿಕೆಎವೈ ಅನ್ನು ಕಳೆದ ವರ್ಷದ ಮಾರ್ಚ್‌ನಲ್ಲಿ ಆರಂಭಿಸಲಾಗಿತ್ತು, ಆರಂಭದಲ್ಲಿ ಕಳೆದ ವರ್ಷದ ಎಪ್ರಿಲ್‌ನಿಂದ ಜೂನ್‌ವರೆಗೆ ವಿತರಿಸಲು ಉದ್ದೇಶಿಸಲಾಗಿತ್ತಾದರೂ ಬಳಿಕ ಅದನ್ನು ನ.30ರವರೆಗೆ ವಿಸ್ತರಿಸಲಾಗಿತ್ತು.