ಖಾತೆ ತೆರೆಯುವಲ್ಲಿ ಭ್ರಷ್ಟಾಚಾರ: ಮಹಾರಾಷ್ಟ್ರ ಮೂಲದ ಕೋ-ಆಪರೇಟಿವ್ ಬ್ಯಾಂಕ್ ನ 53 ಕೋಟಿ ರೂ. ಠೇವಣಿ ಸ್ತಂಭನ
ಹೊಸದಿಲ್ಲಿ, ನ. 6: ಇತ್ತೀಚೆಗಿನ ದಾಳಿಯ ಸಂದರ್ಭ ಖಾತೆ ತೆರೆಯುವಲ್ಲಿ ಎದ್ದು ಕಾಣುವ ಅಕ್ರಮ ಪತ್ತೆಯಾದ ಬಳಿಕ ಮಹಾರಾಷ್ಟ್ರದ ಅರ್ಬನ್ ಕ್ರೆಡಿಟ್ ಕೋ-ಆಪರೇಟಿವ್ ಬ್ಯಾಂಕೊಂದರ 53 ಕೋಟಿ ರೂಪಾಯಿ ಠೇವಣಿಯನ್ನು ಆದಾಯ ತೆರಿಗೆ ಇಲಾಖೆ ಸ್ಥಂಭನಗೊಳಿಸಿದೆ ಎಂದು ಸಿಬಿಡಿಟಿ ಶನಿವಾರ ಹೇಳಿದೆ.
ಬ್ಯಾಂಕ್ ನ ಅಧ್ಯಕ್ಷರು ಹಾಗೂ ನಿರ್ದೇಶಕರ ನಿವಾಸ ಹಾಗೂ ಬ್ಯಾಂಕ್ ನ ಕೇಂದ್ರ ಕಚೇರಿ ಮೇಲೆ ಆದಾಯ ತೆರಿಗೆ ಇಲಾಖೆ ಅಕ್ಟೋಬರ್ 27ರಂದು ದಾಳಿ ನಡೆಸಿತ್ತು. ಶೋಧ ಮಾಡಲಾದ ಸಂಸ್ಥೆಯ ಹೆಸರಿನ ಬಗ್ಗೆ ಇಲಾಖೆ ಅಧಿಕೃತ ಹೇಳಿಕೆ ನೀಡಿಲ್ಲ. ಅದು ಬುಲ್ಡಾನಾ ಅರ್ಬನ್ ಕ್ರೆಡಿಟ್ ಕೋ-ಆಪರೇಟಿವ್ ಬ್ಯಾಂಕ್ ಎಂದು ಮೂಲಗಳು ತಿಳಿಸಿವೆ. ಶೋಧ ಕಾರ್ಯಾಚರಣೆ ಸಂದರ್ಭ ದಾಖಲಿಸಲಾದ ಪ್ರಮುಖ ವ್ಯಕ್ತಿಗಳ ಹೇಳಿಕೆ ಹಾಗೂ ಕೋರ್ ಬ್ಯಾಂಕಿಂಗ್ ಸೊಲ್ಯುಷನ್ಸ್ (ಸಿಬಿಎಸ್) ಕುರಿತ ದತ್ತಾಂಶದ ವಿಶ್ಲೇಷಣೆಯಲ್ಲಿ ಬ್ಯಾಂಕ್ ಖಾತೆ ತೆರೆಯುವಲ್ಲಿ ನಡೆದ ಭ್ರಷ್ಟಾಚಾರ ಕಂಡು ಬಂದಿತ್ತು.
‘‘ಪಾನ್ ಕಾರ್ಡ್ ಇಲ್ಲದೆ 1,200ಕ್ಕೂ ಅದಿಕ ಹೊಸ ಖಾತೆಗಳನ್ನು ಬ್ಯಾಂಕ್ನಲ್ಲಿ ತೆರೆಯಲಾಗಿದೆ’’ ಎಂದು ಕೇಂದ್ರ ನೇರ ತೆರಿಗೆಗಳ ಇಲಾಖೆ ಹೇಳಿಕೆಯಲ್ಲಿ ತಿಳಿಸಿದೆ. ಈ ಖಾತೆಗಳನ್ನು ಕೆವೈಸಿ (ಕ್ನೋ ಯುವರ್ ಕಸ್ಟಮರ್) ನಿಯಮದ ಪ್ರಕಾರ ಆರಂಭಿಸಿಲ್ಲ ಎಂಬುದು ಪತ್ತೆಯಾಗಿದೆ. ಎಲ್ಲ ಖಾತೆ ತೆರೆಯುವ ಅರ್ಜಿಗಳನ್ನು ಬ್ಯಾಂಕ್ನ ಸಿಬ್ಬಂದಿಯೇ ತುಂಬಿಸಿದ್ದಾರೆ ಹಾಗೂ ಅದಕ್ಕೆ ಸಹಿ, ಹೆಬ್ಬೆಟ್ಟು ಹಾಕಿದ್ದಾರೆ ಎಂದು ತನಿಖೆಯಲ್ಲಿ ಬಹಿರಂಗಗೊಂಡಿದೆ.