ಬೆಂಗಳೂರು: ದೀಪಾವಳಿ ಪಟಾಕಿ ಸಂಭ್ರಮ; 40ಕ್ಕೂ ಅಧಿಕ ಮಕ್ಕಳ ಕಣ್ಣು, ಮುಖಕ್ಕೆ ಹಾನಿ

ಬೆಂಗಳೂರು: ದೀಪಾವಳಿಯ ಪಟಾಕಿ ಸಂಭ್ರಮ ಮಕ್ಕಳು ಸೇರಿದಂತೆ ಹಲವರ ಬಾಳಲ್ಲಿ ಅಂಧಕಾರ ತಂದಿಟ್ಟಿದ್ದು, 40ರಿಂದ 50 ಮಕ್ಕಳಿಗೆ ಕಣ್ಣು, ಮುಖ ಹಾಗೂ ಕೈ-ಕಾಲುಗಳಿಗೆ ಸುಟ್ಟ ಗಾಯಗಳಾಗಿದ್ದು ನಗರದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಬ್ಬರು ಮಕ್ಕಳು ದೃಷ್ಟಿ ಕಳೆದುಕೊಳ್ಳುವ ಪರಿಸ್ಥಿತಿ ತಲುಪಿದ್ದು, 25ಕ್ಕೂ ಹೆಚ್ಚು ಮಕ್ಕಳ ಕಣ್ಣಿಗೆ ಹಾನಿ ಮಾಡಿಕೊಂಡಿದ್ದಾರೆ. ಪಟಾಕಿ ಸಿಡಿತದಿಂದ ಕಣ್ಣು ಹಾನಿಗೊಂಡ ಮಕ್ಕಳು ನಗರದ ಮೋದಿ, ಮಿಂಟೋ, ನಾರಾಯಣ ನೇತ್ರಾಲಯ, ಶೇಖರ್ ಸೇರಿದಂತೆ ವಿವಿಧ ಕಣ್ಣಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದು, ಸುಟ್ಟ ಗಾಯಕ್ಕೆ ಒಳಗಾದವರು ವಿಕ್ಟೋರಿಯಾ, ಬೌರಿಂಗ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ ಎಂದು ಗೊತ್ತಾಗಿದೆ.
ಮಿಂಟೋ ಕಣ್ಣಾಸ್ಪತ್ರೆಯಲ್ಲಿ ಪಟಾಕಿ ಸಿಡಿತದಿಂದ ಕಣ್ಣುಗಳಿಗೆ ಹಾನಿಯಾದ 20 ಮಂದಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ನಾರಾಯಣ ಮತ್ತಿತರ ಕಣ್ಣಾಸ್ಪತ್ರೆಗಳಲ್ಲಿ 10ಕ್ಕೂ ಹೆಚ್ಚು ಮಂದಿ ಚಿಕಿತ್ಸೆ ಪಡೆದಿದ್ದಾರೆ. ಹಬ್ಬದ ಸಂದರ್ಭದಲ್ಲಿ ಪಟಾಕಿ ಸಿಡಿಸುವಾಗ ಬಸವನಗುಡಿಯ ಬಾಲಕನ ಮೇಲಿನ ಚರ್ಮ ಮತ್ತು ಕಣ್ಣುಗಳಿಗೆ ಹಾನಿಯಾಗಿದ್ದು, ಆತ ಮಿಂಟೋ ಕಣ್ಣಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ತಿಳಿದು ಬಂದಿದೆ.
ಚಾಮರಾಜಪೇಟೆಯ ಕೆ.ಜಿ.ನಗರದ 16 ವರ್ಷದ ಬಾಲಕ ಅಭಯ್ ಹೂಕುಂಡ ಹಚ್ಚುವಾಗ ಸಿಡಿದು ಕಣ್ಣಿಗೆ ಹಾನಿಯಾಗಿದೆ. ನಾಗರಬಾವಿಯ 9 ವರ್ಷದ ಪ್ರಜ್ವಲ್ ಬಿಜಿಲಿ ಹಚ್ಚುವಾಗ ಕಣ್ಣಿಗೆ ಹಾನಿ ಮಾಡಿಕೊಂಡಿದ್ದಾನೆ. ಗೋರಿಪಾಳ್ಯದ 5 ವರ್ಷದ ಆರ್ಮೆನ್ ಎಂಬ ಬಾಲಕನಿಗೂ ಪಟಾಕಿ ಹಚ್ಚುವಾಗ ಕಣ್ಣಿಗೆ ಹಾನಿಯಾಗಿದ್ದು, ಆತನಿಗೂ ಕೋವಿಡ್ ಪರೀಕ್ಷೆ ನಡೆಸಿ ಚಿಕಿತ್ಸೆ ನೀಡಲಾಗಿದೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.
ಎರಡು ದಿನಗಳು ಸಂಜೆ ವೇಳೆ ಸಣ್ಣ ಪ್ರಮಾಣದ ಮಳೆ ಬಿದ್ದ ಪರಿಣಾಮ ಪಟಾಕಿ ಅಬ್ಬರ ಅಷ್ಟಾಗಿ ಇರಲಿಲ್ಲ. ಆದರೆ, ಇಂದು ಪುನಃ ಪಟಾಕಿ ಸಂಭ್ರಮ ಹೆಚ್ಚಾಗಿದೆ. ವೈದ್ಯರು ಎಷ್ಟೇ ಎಚ್ಚರಿಕೆ ನೀಡಿದರೂ ಪಟಾಕಿ ಸಿಡಿಸಿ ಕಣ್ಣು, ಮುಖ ಮತ್ತು ಕೈ-ಕಾಲುಗಳಿಗೆ ಹಾನಿ ಮಾಡಿಕೊಳ್ಳುವ ಪ್ರಕರಣಗಳು ಹೆಚ್ಚುತ್ತಿವೆ.







