ಮೈಕೆಲ್ ವಾನ್ ವಿರುದ್ದ ಜನಾಂಗೀಯ ನಿಂದನೆ ಆರೋಪ
ಬಿಬಿಸಿಯಿಂದ ಖೊಕ್

ಲಂಡನ್, ನ. 6: ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಮೈಕೆಲ್ ವಾನ್ ತಮ್ಮ ವಿರುದ್ಧ ಜನಾಂಗೀಯ ನಿಂದನೆಯ ಮಾತುಗಳನ್ನು ಆಡಿದ್ದಾರೆ ಎಂಬುದಾಗಿ ಇಬ್ಬರು ಆಟಗಾರರು ಆರೋಪಿಸಿದ ಬಳಿಕ, ಅವರನ್ನು ಬಿಬಿಸಿಯ ಕಾರ್ಯಕ್ರಮವೊಂದರಿಂದ ಕೈಬಿಡಲಾಗಿದೆ
ಬಿಬಿಸಿ 5 ಲೈವ್ ಚಾನೆಲ್‌ನ ‘ದ ಟಫರ್ಸ್ ಆ್ಯಂಡ್ ವಾನ್ ಕ್ರಿಕೆಟ್ ಶೋ’ ಕಾರ್ಯಕ್ರಮದಲ್ಲಿ ವಾನ್ 12 ವರ್ಷಗಳಿಂದ ಟೆಸ್ಟ್ ಪಂದ್ಯಗಳ ಪರಿಣತ ವಿಶ್ಲೇಷಕರಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ ಅವರು ಸೋಮವಾರ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ.
2009ರಲ್ಲಿ ಯಾರ್ಕ್‌ಶೈರ್ ಪಂದ್ಯಕ್ಕೆ ಮುನ್ನ ನನ್ನ ಮತ್ತು ಇತರ ಆಟಗಾರರ ವಿರುದ್ಧ ವಾನ್ ಜನಾಂಗೀಯ ನಿಂದನೆಯ ಮಾತುಗಳನ್ನು ಆಡಿದ್ದರು ಎಂಬುದಾಗಿ ಅಝಿಮ್ ರಫೀಕ್ ಆರೋಪಿಸಿದ್ದಾರೆ.
ಅದೇ ವೇಳೆ, ‘ಡೇಲಿ ಟೆಲಿಗ್ರಾಫ್’ನ ತನ್ನ ಅಂಕಣದಲ್ಲಿ, ತನ್ನ ವಿರುದ್ಧದ ಆರೋಪಗಳನ್ನು ಮೈಕೆಲ್ ವಾನ್ ನಿರಾಕರಿಸಿದ್ದಾರೆ.
‘‘ಇಲ್ಲಿ ನಿಮ್ಮ ಸಂಖ್ಯೆಯೇ ಅಧಿಕವಾಯಿತು. ಇದಕ್ಕೆ ಏನಾದರೂ ಮಾಡಬೇಕು’’ ಎಂಬುದಾಗಿ ರಫೀಕ್ ಸೇರಿದಂತೆ ಏಶ್ಯನ್ ಆಟಗಾರರ ಗುಂಪನ್ನು ಉದ್ದೇಶಿಸಿ ವಾನ್ ಹೇಳಿದ್ದರು ಎನ್ನಲಾಗಿದೆ.







