ಲಕ್ಷ್ಮೀ ಮೂರ್ತಿ ವಿಸರ್ಜನೆ ವೇಳೆ ಸಂಗೀತದ ಧ್ವನಿ ತಗ್ಗಿಸಲು ಹೇಳಿದ ಪೊಲೀಸರತ್ತ ಗುಂಡು ಹಾರಾಟ

ಗಯಾ, ನ.7: ಲಕ್ಷ್ಮೀ ಪೂಜೆ ವೇಳೆ ನಡೆದ ಘರ್ಷಣೆಯಲ್ಲಿ ಮೋಜುಗಾರರ ಗುಂಪು ಪೊಲೀಸರತ್ತ ಕಲ್ಲೆಸೆದು, ಗುಂಡು ಹಾರಿಸಿದ ಘಟನೆ ಬಿಹಾರದ ಗಯಾ ಸಮೀಪ ಶನಿವಾರ ರಾತ್ರಿ ಸಂಭವಿಸಿದೆ. ಘಟನೆಯಲ್ಲಿ ಒಬ್ಬರು ಠಾಣಾಧಿಕಾರಿ ಮತ್ತು ಇತರ ಇಬ್ಬರು ಪೊಲೀಸರು ಗಾಯಗೊಂಡಿದ್ದಾರೆ.
ಗಯಾ ಪಟ್ಟಣದ ಥಾನಕುಪ್ಪ ಎಂಬಲ್ಲಿ ಈ ಘಟನೆ ನಡೆದಿದ್ದು, ಲಕ್ಷ್ಮೀ ಮೂರ್ತಿ ವಿಸರ್ಜನೆ ವೇಳೆ ಗಟ್ಟಿಯಾಗಿ ಕೇಳಿ ಬರುತ್ತಿದ್ದ ಮ್ಯೂಸಿಕ್ ಧ್ವನಿಯನ್ನು ಕಡಿಮೆ ಮಾಡುವಂತೆ ಪೊಲೀಸರು ಸಂಘಟಕರಿಗೆ ಸೂಚಿಸಿದ್ದೇ ಘರ್ಷಣೆಗೆ ಕಾರಣವಾಯಿತು ಎನ್ನಲಾಗಿದೆ.
ಗಯಾ ಠಾಣಾಧಿಕಾರಿ ಅಜಯ್ ಕುಮಾರ್ ಅವರ ಎಡಗಾಲಿಗೆ ಗುಂಡೇಟು ತಲುಗಿದೆ ಎಂದು ಗಯಾ ವಿಶೇಷ ಎಸ್ಪಿ ಆದಿತ್ಯ ಕುಮಾರ್ ಹೇಳಿದ್ದಾರೆ. ಸಶಸ್ತ್ರ ಪೊಲೀಸ್ ಪಡೆಯ ಇಬ್ಬರು ಜವಾನರು ಕಲ್ಲು ತೂರಾಟದಲ್ಲಿ ಗಾಯಗೊಂಡಿದ್ದಾರೆ ಎಂದು ಅವರು ವಿವರಿಸಿದ್ದಾರೆ.
ಆರೋಪಿಗಳನ್ನು ಗುರುತಿಸಲಾಗಿದ್ದು, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಅವರು ಹೇಳಿದ್ದಾರೆ.
Next Story