ತಮಿಳುನಾಡಿನ ಕೆಲವು ಭಾಗಗಳಲ್ಲಿ ಪ್ರವಾಹದ ಎಚ್ಚರಿಕೆ
2015ರ ಬಳಿಕ ಚೆನ್ನೈನಲ್ಲಿ ಭಾರೀ ಮಳೆ

Screengrab(Twitter/@@thenewsminute)
ಚೆನ್ನೈ: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾದ ಪರಿಣಾಮವಾಗಿ ಚೆನ್ನೈ ಹಾಗೂ ಅದರ ಉಪನಗರ ಪ್ರದೇಶಗಳಲ್ಲಿ ರಾತ್ರಿಯಿಡೀ ಭಾರೀ ಮಳೆ ಸುರಿದಿದೆ ಹಾಗೂ ಮಳೆ ಮುಂದುವರೆದಿದೆ. ಸುತ್ತಲೂ ಜಲಾವೃತವಾಗಿದ್ದು ಎರಡು ನಗರ ಜಲಾಶಯಗಳನ್ನು ತೆರೆಯಲು ಸಿದ್ಧವಾಗಿರುವ ಕಾರಣ ಅಧಿಕಾರಿಗಳು ರವಿವಾರ ಜನರಿಗೆ ಪ್ರಾಥಮಿಕ ಪ್ರವಾಹ ಎಚ್ಚರಿಕೆಯನ್ನು ನೀಡಿದ್ದಾರೆ.
ಚೆಂಬರಂಬಾಕ್ಕಂ ಮತ್ತು ರೆಡ್ ಹಿಲ್ಸ್ ಜಲಾಶಯಗಳಿಂದ 500 ಕ್ಯೂಸಕ್ಸ್ ನೀರನ್ನು ಕ್ರಮವಾಗಿ ಮಧ್ಯಾಹ್ನ 1.30 ಹಾಗೂ ಬೆಳಿಗ್ಗೆ 11 ಗಂಟೆಗೆ ಬಿಡುಗಡೆ ಮಾಡಲಾಗಿದೆ.
ಅರಕ್ಕೋಣಂ ಬಳಿ ಹಳಿಗಳು ಜಲಾವೃತಗೊಂಡಿದ್ದರಿಂದ ಎಂಜಿಆರ್ ಸೆಂಟ್ರಲ್ಗೆ ರೈಲುಗಳ ಆಗಮನ ವಿಳಂಬವಾಗಿದೆವಾಗಿದೆ ಎಂದು ವರದಿಯಾಗಿದೆ.
ಭಾರತದ ಹವಾಮಾನ ಇಲಾಖೆ ಮುಂದಿನ ಒಂದು ಗಂಟೆಯಲ್ಲಿ ಚೆನ್ನೈನಲ್ಲಿ ಭಾರೀ ಮಳೆಯ ಮುನ್ಸೂಚನೆ ನೀಡಿದೆ.
ಚೆನ್ನೈ ನಗರಕ್ಕೆ ಕುಡಿಯುವ ನೀರಿನ ಪ್ರಮುಖ ಮೂಲಗಳಾಗಿರುವ ಚೆಂಬರಂಬಾಕ್ಕಂ ಹಾಗೂ ಪುಝಲ್ ಜಲಾಶಯಗಳನ್ನು ಹೆಚ್ಚುವರಿ ಮಳೆ ನೀರನ್ನು ಹೊರಬಿಡಲು ತೆರೆಯಲಾಗುವುದು ಎಂದು ಅಧಿಕಾರಿಗಳು ಪ್ರಕಟಿಸಿದ್ದಾರೆ.
ಪ್ರಾಥಮಿಕ ಪ್ರವಾಹದ ಎಚ್ಚರಿಕೆ ನೀಡಿರುವ ರಾಜ್ಯ ಜಲಸಂಪನ್ಮೂಲ ಅಧಿಕಾರಿಗಳು ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರನ್ನು ಸ್ಥಳಾಂತರಿಸಲು ಹಾಗೂ ಸುರಕ್ಷಿತ ಸ್ಥಳಗಳಲ್ಲಿ ಇರಿಸಲು ಕಾಂಚೀಪುರಂ ಮತ್ತು ತಿರುವಳ್ಳೂರು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ.
ಶನಿವಾರ ಬೆಳಿಗ್ಗೆಯಿಂದ ಚೆನ್ನೈ ಹಾಗೂ ಕಾಂಚೀಪುರಂ ಮತ್ತು ತಿರುವಳ್ಳೂರು ಜಿಲ್ಲೆಗಳ ಹಲವಾರು ಉಪನಗರಗಳಲ್ಲಿ ಮಳೆಯಾಗಿದೆ ಮತ್ತು ರಾತ್ರಿಯಿಂದಲೂ ಮಳೆಯು ಎಡೆಬಿಡದೆ ಸುರಿಯಿತು. ಇದು ಅನೇಕ ಪ್ರದೇಶಗಳಲ್ಲಿ ಪ್ರವಾಹಕ್ಕೆ ಕಾರಣವಾಯಿತು.