ಕೋಟೆಕಾರ್: ವಾಹನ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ಯುವಕ ಮೃತ್ಯು

ಉಳ್ಳಾಲ, ನ.7: ಸ್ನೇಹಿತನೊಂದಿಗೆ ರಸ್ತೆ ದಾಟುತ್ತಿದ್ದ ಯುವಕನೋರ್ವ ಅಪರಿಚಿತ ವಾಹನ ಢಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ರಾ.ಹೆ.66 ರ ಬೀರಿ ಎಂಬಲ್ಲಿ ಶನಿವಾರ ರಾತ್ರಿ ನಡೆದಿದೆ.
ಮೃತರನ್ನು ಧಾರವಾಡ ಮೂಲದ ವಲಸೆ ಕಾರ್ಮಿಕ ಆನಂದ್ ಅಲಿಯಾಸ್ ಸಾಗರ್(28) ಎಂದು ಗುರುತಿಸಲಾಗಿದೆ.
ಸಂಕೋಳಿಗೆಯ ಎ.ಕೆ ಟ್ರೇಡರ್ಸ್ ಎಂಬ ಸಿಮೆಂಟ್ ಅಂಗಡಿಯಲ್ಲಿ ಕೂಲಿ ಕಾರ್ಮಿಕನಾಗಿ ದುಡಿಯುತ್ತಿದ್ದ ಆನಂದ್ ಶನಿವಾರ ರಾತ್ರಿ ಸ್ನೇಹಿತನ ಜೊತೆ ಬೀರಿಯ ಹೆದ್ದಾರಿ ಬದಿಯಲ್ಲಿರುವ ಟಿಕ್ಕಾ ಪಾಯಿಂಟ್ ಎಂಬ ರೆಸ್ಟೋರೆಂಟ್ ಗೆ ತೆರಳಿದ್ದರು. ಅಲ್ಲಿ ಊಟ ಮುಗಿಸಿ ಹಿಂದಿರುಗಲು ರಸ್ತೆ ದಾಟುತ್ತಿದ್ದ ವೇಳೆ ಅಪರಿಚಿತ ವಾಹನವೊಂದು ಢಿಕ್ಕಿ ಹೊಡೆದು ಪರಾರಿಯಾಗಿದೆ ಎನ್ನಲಾಗಿದೆ. ಢಿಕ್ಕಿಯ ರಭಸಕ್ಕೆ ಆನಂದ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಮಂಗಳೂರು ದಕ್ಷಿಣ ಸಂಚಾರಿ ಪೊಲೀಸರು ಸ್ಥಳಕ್ಕೆ ತೆರಳಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸ್ಥಳದಲ್ಲಿನ ಸಿಸಿಟಿವಿ ಕ್ಯಾಮರಾದ ಫೂಟೇಜನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
Next Story





