"ಸಹಾಯದ ಭರವಸೆ ನೀಡಿ ಈಗ ನಿರ್ಲಕ್ಷಿಸಲಾಗುತ್ತಿದೆ": ಅಮಿತ್ ಶಾಗೆ ಊಟದ ವ್ಯವಸ್ಥೆ ಮಾಡಿದ್ದ ಬುಡಕಟ್ಟು ವ್ಯಕ್ತಿಯ ಅಳಲು

Photo: Telegraphindia
ಹೊಸದಿಲ್ಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಕಳೆದ ವರ್ಷ ನವೆಂಬರ್ 5ರಂದು ಬಂಕುರಾದ ಬುಡಕಟ್ಟು ಪ್ರದೇಶಗಳಿಗೆ ತೆರಳಿದ್ದ ಸಂದರ್ಭದಲ್ಲಿ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಿದ್ದ ಬಿಬಿಶಾನ್ ಹನ್ಸಡಾ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಧುಮೇಹ ಪೀಡಿತ ನನ್ನ ಸಣ್ಣಮಗಳ ಚಿಕಿತ್ಸೆಗೆ ವ್ಯವಸ್ಥೆ ಮಾಡುತ್ತೇವೆಂದು ಭರವಸೆ ನೀಡಿದ್ದ ಬಿಜೆಪಿ ಮುಖಂಡರು ಈಗ ತನ್ನನ್ನು ನಿರ್ಲಕ್ಷ್ಯಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾಗಿ telegraphindia.com ವರದಿ ಮಾಡಿದೆ.
ಟೆಲಿಗ್ರಾಫ್ ಜೊತೆ ಮಾತನಾಡಿದ ಬಿಬಿಶಾನ್, "ನನಗೆ ಅಂದು ಮನೆಗೆ ಬಂದಿದ್ದ ಅತಿಥಿಗಳೊಡನೆ ಮಾತನಾಡಲೂ ಬಿಟ್ಟಿಲ್ಲ. ನನ್ನ ಸಣ್ಣ ಮಗಳು ಮಧುಮೇಹ ಪೀಡಿತಳಾಗಿದ್ದು ಆಕೆಯ ಚಿಕಿತ್ಸೆಯ ಕುರಿತು ನನಗೆ ಗೃಹಸಚಿವರೊಂದಿಗೆ ಮಾತನಾಡಬೇಕಿತ್ತು. ಅದಕ್ಕೂ ಅವಕಾಶ ನೀಡಿಲ್ಲ. ಮಗಳ ಚಿಕಿತ್ಸೆಗೆ ಸಹಾಯ ಮಾಡುತ್ತೇವೆಂದು ಬಿಜೆಪಿ ನಾಯಕರು ತಿಳಿಸಿದರು. ಅವಳನ್ನು ಏಮ್ಸ್ ದಿಲ್ಲಿಯಲ್ಲಿ ದಾಖಲು ಮಾಡುವುದಾಗಿಯೂ ಹೇಳಿದ್ದರು. ಆದರೆ ಈಗ ಅವರು ನೀಡಿದ್ದ ಭರವಸೆಗಳನ್ನು ಮರೆತಿದ್ದಾರೆ" ಎಂದು ಹೇಳಿಕೆ ನೀಡಿದ್ದಾರೆ.
ಅವರ ಪುತ್ರಿ ರಚನಾಗೆ 18 ವರ್ಷ ಪ್ರಾಯವಾಗಿದ್ದು, ಆಕೆಗೆ ತಿಂಗಳಿನಲ್ಲಿ 5,000ರೂ.ಯ ಔಷಧಿಗಳ ಅಗತ್ಯವಿದೆ ಎಂದು ವರದಿ ಉಲ್ಲೇಖಿಸಿದೆ.
"ನಾಲ್ಕು ತಿಂಗಳ ಹಿಂದಿನವರೆಗೆ ಬಿಜೆಪಿಗರು ನನಗೆ ಸಹಾಯ ಮಾಡಿದ್ದರು. ಉಚಿತ ಔಷಧಿ ದೊರಕುವಂತೆ ಮಾಡಿದ್ದರು. ಆದರೆ ಅದರ ಬಳಿಕ ಯಾವುದೇ ಸಹಾಯ ಮಾಡುತ್ತಿಲ್ಲ. ನನ್ನ ಸ್ವಂತ ಖರ್ಚಿನಿಂದಲೇ ಭರಿಸುವಂತೆ ಒತ್ತಡ ಹೇರಲಾಗುತ್ತಿದೆ. ನಾನು ಕಷ್ಟಪಟ್ಟು ದುಡಿದರೂ 10,000 ಸಂಪಾದಿಸಲು ಮಾತ್ರ ನನಗೆ ಸಾಧ್ಯ ಎಂದು ಹನ್ಸ್ಡಾ ಹೇಳುತ್ತಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ ಬಂಕುರಾ ಸಂಸದ ಸುಭಾಶ್ ಸರ್ಕಾರ್, "ಕೋವಿಡ್ ಸಾಂಕ್ರಾಮಿಕದ ಕಾರಣದಿಂದ ಆಕೆಯನ್ನು ಏಮ್ಸ್ ಗೆ ಕರೆದೊಯ್ಯಲು ನಮಗೆ ಸಾಧ್ಯವಾಗಿರಲಿಲ್ಲ. ಸ್ಥಳೀಯ ಮೆಡಿಕಲ್ ಶಾಪ್ ಒಂದರಲ್ಲಿ ಅವರಿಗೆ ಉಚಿತ ಔಷಧದ ವ್ಯವಸ್ಥೆ ಮಾಡಿದ್ದೆವು. ಅವರು ಆ ಬಳಿಕ ಔಷಧಿ ಕೊಂಡೊಯ್ದಿರಲಿಕ್ಕಿಲ್ಲ. ನಾವು ಆ ಕುಟುಂಬದೊಂದಿಗೆ ಇದ್ದೇವೆ" ಎಂದು ಹೇಳಿಕೆ ನೀಡಿದ್ದಾರೆ.