ಭಾರತದ ಮಾಜಿ ಕ್ರಿಕೆಟಿಗ ಚೇತನ್ ಶರ್ಮಾ ಸೇರಿದಂತೆ 13 ಮಂದಿಗೆ 1.34 ಕೋಟಿ ರೂಪಾಯಿ ವಂಚಿಸಿದ ಬಿಲ್ಡರ್ ಬಂಧನ

ಹೊಸದಿಲ್ಲಿ: ಭಾರತದ ಮಾಜಿ ಕ್ರಿಕೆಟಿಗ ಚೇತನ್ ಶರ್ಮಾ ಸೇರಿದಂತೆ 13 ಮಂದಿಗೆ ವಂಚಿಸಿದ ಬಿಲ್ಡರ್ ನೊಬ್ಬನನ್ನು ದಿಲ್ಲಿ ಪೊಲೀಸರ ಆರ್ಥಿಕ ಅಪರಾಧ ವಿಭಾಗ (ಇಒಡಬ್ಲ್ಯು) ಬಂಧಿಸಿದೆ.
ಆರೋಪಿ ಹೆಚ್ಚಿನ ಆದಾಯದ ನೆಪದಲ್ಲಿ ಸಂತ್ರಸ್ತರಿಂದ ಹೂಡಿಕೆಗಳನ್ನು ತೆಗೆದುಕೊಂಡಿದ್ದಾನೆ. ಆದರೆ ಹಣವನ್ನು ಹಿಂತಿರುಗಿಸಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಆತನನ್ನು ವಿಚಾರಣೆ ನಡೆಸಲಾಗುತ್ತಿದೆ.
ಇಒಡಬ್ಲ್ಯು ಮಹಿಳೆ ಹಾಗೂ ಶರ್ಮಾ ಅವರ ಕುಟುಂಬ ಸೇರಿದಂತೆ ಇತರ 12 ಜನರಿಂದ ದೂರನ್ನು ಸ್ವೀಕರಿಸಿದೆ. ಆರೋಪಿ ಹಾಗೂ ಅವರ ಕುಟುಂಬದಿಂದ 2017 ರಲ್ಲಿ 1.34 ಕೋಟಿ ರೂ. ವಂಚಿಸಲಾಗಿದೆ ಎಂದು ಆರೋಪಿಸಿದ್ದಾರೆ.
ಆರೋಪಿ ಸಮೀರ್ ಚಾವ್ಲಾ (53) ತನ್ನ ಕುಟುಂಬದೊಂದಿಗೆ ಮೆಹ್ರೌಲಿಯಲ್ಲಿ ವಾಸವಾಗಿದ್ದಾನೆ. ಸಮೀರ್ ಹೂಡಿಕೆ ಯೋಜನೆಗಳೊಂದಿಗೆ ಜನರನ್ನು ಸಂಪರ್ಕಿಸಿದ ಹಾಗು ಆ ಯೋಜನೆಗಳಲ್ಲಿ ಹೆಚ್ಚಿನ ಆದಾಯದ ಭರವಸೆ ನೀಡಿದ್ದ. ಆರಂಭದಲ್ಲಿ ನಂಬಿಕೆ ಮೂಡಿಸಲು ಕೆಲವು ಬಲಿಪಶುಗಳಿಗೆ ಸ್ವಲ್ಪ ಹಣವನ್ನು ಹಿಂದಿರುಗಿಸಿದ್ದ. ನಂತರ ಹಣ ನೀಡುವುದನ್ನು ನಿಲ್ಲಿಸಿ ಮೂಲ ಮೊತ್ತ ವಾಪಸ್ ನೀಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.





