ಆಡಿನೆನ್ಸ್ ಫ್ಯಾಕ್ಟರಿಯಲ್ಲೇ ತಯಾರಾದ ಗ್ರೆನೇಡ್: ಎಸ್ಪಿ ಋಷಿಕೇಶ್ ಸೊನಾವಣೆ
ಇಳಂತಿಲ ಗ್ರೆನೇಡ್ ಪತ್ತೆ ಪ್ರಕರಣ

ಮಂಗಳೂರು, ನ.7: ಉಪ್ಪಿನಂಗಡಿಯ ಇಳಂತಿಲ ಗ್ರಾಮದಲ್ಲಿ ನಿವೃತ್ತ ಯೋಧರೊಬ್ಬರ ಮನೆ ದಾರಿಯಲ್ಲಿ ಪತ್ತೆಯಾದ ಗ್ರೆನೇಡ್‌ಗಳು ಆರ್ಡಿನೆನ್ಸ್ ಫ್ಯಾಕ್ಟರಿಯಲ್ಲಿ ತಯಾರಾದ ಗ್ರೆನೇಡ್ ಆಗಿದ್ದು, ಅದನ್ನು ಬೇರೆ ಯಾವ ಉದ್ದೇಶಕ್ಕೂ ಯಾರೂ ಬಳಸಲು ಸಾಧ್ಯವಿಲ್ಲದ ಕಾರಣ, ಅದು ಅಲ್ಲಿಗೆ ಹೇಗೆ ಬಂತು ಎಂಬ ಬಗ್ಗೆ ಕೂಲಂಕುಷ ತನಿಖೆ ನಡೆಸಲಾಗುವುದು ಎಂದು ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಸೊನಾವಣೆ ತಿಳಿಸಿದ್ದಾರೆ.
ನ.6ರಂದು ರಾತ್ರಿ ನಿವೃತ್ತ ಯೋಧ ಜಯಕುಮಾರ್ ಪೂಜಾರಿ ಎಂಬವರು ಇಳಂತಿಲದಲ್ಲಿರುವ ತಮ್ಮ ಮನೆ ದಾರಿಮಧ್ಯೆ ಐದು ಗ್ರೆನೇಡ್‌ಗಳು ಪತ್ತೆಯಾಗಿರುವ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಬಗ್ಗೆ ಸುದ್ದಿಗಾರರ ಪ್ರಶ್ನೆಗಳಿಗೆ ಇಂದು ಪ್ರತಿಕ್ರಿಯಿಸಿದ ಪೊಲೀಸ್ ವರಿಷ್ಠಾಧಿಕಾರಿ ಸೊನಾವಣೆ ಈ ಸ್ಪಷ್ಟನೆ ನೀಡಿದ್ದಾರೆ.
ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಇಳಂತಿಲ ಗ್ರಾಮದಲ್ಲಿ ನಿವೃತ್ತ ಯೋಧ ಜಯಕುಮಾರ್ ಪೂಜಾರಿ ಎಂಬವರ ಮನೆಯ ಪಕ್ಕ ಯಾರೋ ಅಜ್ಞಾತ ವ್ಯಕ್ತಿಗಳು ಪ್ಲಾಸ್ಟಿಕ್ ಚೀಲದಲ್ಲಿ ಐದು ಗ್ರೆನೇಡ್ ರೂಪದ ವಸ್ತುಗಳನ್ನು ಇಟ್ಟಿರುವುದಾಗಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದರ ಆಧಾರದಲ್ಲಿ ಠಾಣಾಧಿಕಾರಿ ನೋಡಿದಾಗ ಅದು ಗ್ರೆನೇಡ್ ತರಹ ಕಂಡುಬಂದ ಹಿನ್ನೆಲೆಯಲ್ಲಿ ಬಾಂಬ್ ನಿಷ್ಕ್ರಿಯ ತಂಡದ ಸಿಬ್ಬಂದಿಯನ್ನು ಕರೆಸಿ ಪ್ರಕ್ರಿಯೆ ಅನುಸರಿಸಿ ಮಹಜರು ಮೂಲಕ ಅದನ್ನು ಸ್ವಾಧೀನಪಡಿಸಲಾಗಿದೆ. ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಗ್ರೆನೇಡ್ ಪರಿಶೀಲಿಸಿದಾಗ ಇದು ಆರ್ಡಿನೆನ್ಸ್ ಫ್ಯಾಕ್ಟರಿ (ಸೇನೆಗೆ ಶಸ್ತ್ರಾಸ್ತ್ರ ಉತ್ಪಾದಿಸುವ ಫ್ಯಾಕ್ಟರಿ)ಯಲ್ಲಿ 1979ರಿಂದ 1983 ಅವಧಿಯಲ್ಲಿ ತಯಾರಾಗಿರುವ ದಿನಾಂಕ ಅದರಲ್ಲಿ ಕಂಡುಬಂದಿದೆ. ಹಾಗಾಗಿ ಸುಮಾರು 40 ವರ್ಷಗಳ ಹಳೆಯ ಗ್ರೆನೇಡ್‌ಗಳು ಇದಾಗಿದ್ದು, ಇದು ಯಾವ ಮೂಲದಿಂದ ಇಲ್ಲಿಗೆ ಹೇಗೆ ಬಂದಿದೆ ಬಂದಿದೆ, ಅದರ ಬಳಕೆಯ ಅವಧಿ ಸೇರಿದಂತೆ ಇತರ ಸಂಪೂರ್ಣ ಮಾಹಿತಿಗಳ ಕುರಿತು ತನಿಖೆ ಮುಂದುವರಿದಿದೆ.
ಹ್ಯಾಂಡ್ ಗ್ರೆನೇಡ್‌ಗೆ ನಿಗದಿತ ಬಳಕೆಯ ಅವಧಿಯಿರುತ್ತದೆ. ಅದಕ್ಕಾಗಿಯೇ ನಾವು ಅದನ್ನು ವಶಕ್ಕೆ ಪಡೆಯುವ ಸಂದರ್ಭ ಬಾಂಬ್ ನಿಷ್ಕ್ರಿಯ ತಂಡವನ್ನು ಕರೆಸಿ ಅದು ಸಜೀವ ಗ್ರೆನೇಡ್ ಆಗಿದ್ದಲ್ಲಿ ಯಾವ ರೀತಿ ಕ್ರಮಗಳನ್ನು ಅನುಸರಿಸಲಾಗುವುದೇ ಆದೇ ಪ್ರಕಾರ ಎಲ್ಲ ಪ್ರಕ್ರಿಯೆಗಳನ್ನು ನಡೆಸಿ ಅವುಗಳನ್ನು ವಶಕ್ಕೆ ಪಡೆದಿದ್ದೇವೆ. ನ್ಯಾಯಾಲಯದ ಅನುಮತಿಯ ಮೇರೆಗೆ ಅದನ್ನು ವಿಲೇವಾರಿ ಮಾಡುವ ಪ್ರಕ್ರಿಯೆ ತನಿಖೆಯ ಬಳಿಕ ಮುಂದಿನ ದಿನಗಳಲ್ಲಿ ನಡೆಯಲಿದೆ ಎಂದು ಅವರು ಹೇಳಿದರು.
ಪ್ರಾಣಿಗಳನ್ನು ಬೇಟೆಯಾಡಲು ಇದನ್ನು ಬಳಸಲು ಸಾಧ್ಯವಿಲ್ಲ. ಅಂತಹ ಯಾವುದೇ ಘಟನೆಗಳು ನಮ್ಮಲ್ಲಿ ಈವರೆಗೂ ವರದಿಯಾಗಿಲ್ಲ. ಎಲ್ಲಾ ಆಯಾಮಗಳಲ್ಲೂ ಪ್ರಕರಣದ ತನಿಖೆ ನಡೆಸಲಾಗುವುದು ಎಂದು ಎಸ್ಪಿ ಋಷಿಕೇಶ್ ಸೊನಾವಣೆ ತಿಳಿಸಿದರು.







