ಸಮಾಜದ ಮೌನವು ಲಾಕ್-ಅಪ್ ಚಿತ್ರಹಿಂಸೆಗಿಂತ ಕ್ರೂರವಾಗಿದೆ: ‘ಜೈ ಭೀಮ್’ ನಿರ್ದೇಶಕ ಟಿ.ಜೆ.ಜ್ಞಾನವೇಲ್

2D Entertainment/Amazon Prime Video
ಟಿ.ಜೆ.ಜ್ಞಾನವೇಲ್ ನಿರ್ದೇಶನದ ತಮಿಳು ಸಿನೆಮಾ ನ.2ರಂದು ಅಮೆಝಾನ್ ಪ್ರೈಮ್ ನಲ್ಲಿ ಬಿಡುಗಡೆಗೊಂಡಾಗಿನಿಂದಲೂ ಅವರ ಫೋನ್ ನಿರಂತರವಾಗಿ ರಿಂಗಣಿಸುತ್ತಿದೆ. ‘ಇದೊಂದು ಉತ್ತಮ ಚಿತ್ರ ಎಂದು ಜನರು ಹೇಳುತ್ತಾರೆಂದು ನಾನು ಭಾವಿಸಿದ್ದೆ,ಆದರೆ ಪ್ರತಿಕ್ರಿಯೆಯು ನಿರೀಕ್ಷೆಗಿಂತ ಹೆಚ್ಚು ಅದ್ಭುತವಾಗಿದೆ. ಚಿತ್ರವೀಗ ಚರ್ಚೆಯೊಂದನ್ನು ಹುಟ್ಟುಹಾಕಿದೆ. ಒಂದು ಅರ್ಥದಲ್ಲಿ ವೃತ್ತವೊಂದು ಪೂರ್ಣಗೊಂಡಂತಾಗಿದೆ ’ಎಂದು ಜ್ಞಾನವೇಲ್ ಹೇಳಿದರು.
ಜೈ ಭೀಮ್ ಚಿತ್ರವನ್ನು ಚರ್ಚೆಯನ್ನು ಬಡಿದೆಬ್ಬಿಸಲೆಂದೇ ವಿನ್ಯಾಸಗೊಳಿಸಲಾಗಿದೆ. ಜ್ಞಾನವೇಲ್ ಅವರ ಚಿತ್ರಕಥೆಯು ಡಾ.ಬಿ.ಆರ್.ಅಂಬೇಡ್ಕರ್ ಅವರ ‘ಶಿಕ್ಷಣ,ಆಂದೋಲನ,ಸಂಘಟನೆ ’ ಸಂದೇಶವನ್ನು ನಿಕಟವಾಗಿ ಅನುಸರಿಸಿದೆ. ಅಧಿಕಾರವು ತಾನು ರಕ್ಷಿಸಬೇಕಾದವರಿಗೇ ಹೇಗೆ ನೋವನ್ನುಂಟು ಮಾಡುತ್ತದೆ ಎನ್ನುವುದನ್ನು ಬಹಿರಂಗಗೊಳಿಸಲು ಸಾಮಾಜಿಕ ನ್ಯಾಯ ಮೆಲೋಡ್ರಾಮಾ,ಪತ್ತೇದಾರಿ ರೋಮಾಂಚಕತೆ ಮತ್ತು ಕಾನೂನು ನಾಟಕ ಇವೆಲ್ಲವೂ ಚಿತ್ರದಲ್ಲಿ ಮೇಳೈಸಿವೆ.
ಜೈ ಭೀಮ್ 1993ರ ನೈಜ ಪ್ರಕರಣವೊಂದನ್ನು ಆಧರಿಸಿದೆ. ಕಳ್ಳತನದ ಸುಳ್ಳು ಆರೋಪ ಹೊರಿಸಲ್ಪಟ್ಟು ತನ್ನ ಪತಿ ಮತ್ತು ಇಬ್ಬರು ಸಂಬಂಧಿಗಳು ನಾಪತ್ತೆಯಾಗಿರುವ ಬುಡಕಟ್ಟು ಮಹಿಳೆಯೋರ್ವಳಿಗೆ ನ್ಯಾಯವನ್ನು ದೊರಕಿಸಲು ಸಾಮಾಜಿಕ ಹೋರಾಟಗಾರ ಹಾಗೂ ನ್ಯಾಯವಾದಿಯೋರ್ವನ ಪ್ರಯತ್ನಗಳನ್ನು ಚಿತ್ರವು ಪ್ರಮುಖವಾಗಿ ಬಿಂಬಿಸಿದೆ.
ಸೂಕ್ತ ತನಿಖೆಯನ್ನು ನಡೆಸುವ ಬದಲು ಪೊಲೀಸರು ತಮ್ಮ ಎಂದಿನ ರೀತಿಯಲ್ಲಿ ತಮ್ಮ ವಾದವನ್ನು ಸಾಬೀತುಗೊಳಿಸಲು ಪ್ರಯತ್ನಿಸುತ್ತಾರೆ. ಕೈದಿಗಳನ್ನು ನಿರ್ದಯವಾಗಿ ಥಳಿಸುವ ಪೊಲೀಸರು ಬಳಿಕ ಅವರು ಕಸ್ಟಡಿಯಿಂದ ಪರಾರಿಯಾಗಿದ್ದಾರೆ ಎಂದು ಹೇಳಿಕೊಳ್ಳುತ್ತಾರೆ.
ಕಸ್ಟಡಿ ಚಿತ್ರಹಿಂಸೆಯ ಘೋರ ದೃಶ್ಯಗಳು ಮತ್ತು ತಮ್ಮ ಜಾಡುಗಳನ್ನು ಮರೆಮಾಚಲು ಪೊಲೀಸರು ನಡೆಸಿದ ಪ್ರಯತ್ನಗಳನ್ನು ಕ್ರಮೇಣ ಬಿಚ್ಚಿಟ್ಟಿರುವುದು ಜೈ ಭೀಮ್ ಸಮಾನತೆಯಲ್ಲಿ ಆಸಕ್ತಿ ಹೊಂದಿಲ್ಲ ಎನ್ನುವುದನ್ನು ಸೂಚಿಸುತ್ತದೆ. ಪೊಲೀಸರು ಕಾರಣವೊಂದನ್ನು ಹೊಂದಿರಬಹುದು ಅಥವಾ ವಕೀಲ ತನ್ನ ವೈಯಕ್ತಿಕ ಲಾಭಗಳಿಕೆಗಾಗಿ ತನ್ನ ಕಕ್ಷಿದಾರರನ್ನು ಶೋಷಿಸುತ್ತಿದ್ದಾನೆ ಎಂದು ಸೂಚಿಸುವ ಸುಲಭವಾದ ಮಾರ್ಗದ ಬದಲು ಚಿತ್ರವು ತನ್ನ ನಿಲುವಿಗೆ ದೃಢವಾಗಿ ಅಂಟಿಕೊಂಡಿದೆ.
ಸರಕಾರದ ಆಡಳಿತ ಯಂತ್ರವು ಕೆಲವೊಮ್ಮೆ,ವಿಶೇಷವಾಗಿ ದುರ್ಬಲ ವರ್ಗಗಳಿಗೆ ಅನ್ಯಾಯ ಮತ್ತು ಶೋಷಣೆಯ ಮೂಲವಾಗಬಹುದು ಎಂದು ಬೆಟ್ಟು ಮಾಡಿದ ಜ್ಞಾನವೇಲ್,ನ್ಯಾಯದ ಅನ್ವೇಷಣೆಯೇ ಒಂದು ಹೋರಾಟವಾಗಿದೆ ಎಂದು ಹೇಳಿದರು.

‘ನ್ಯಾಯದ ವಿಕೃತಿಯನ್ನು ತಡೆಯಲು ಜಾಗ್ರತ ಮತ್ತು ನ್ಯಾಯಯುತ ಮನಸ್ಸಿನ ನಾಗರಿಕರ ಅಗತ್ಯವಿದೆ ಎಂದು ಹೇಳಿದ ಅವರು,ಜನರು ಪೊಲೀಸರ ಕ್ರೌರ್ಯದ ದೃಶ್ಯಗಳ ಬಗ್ಗೆ ಮಾತನಾಡುತ್ತಿದ್ದಾರೆ,ಸಮಾಜದ ಮೌನವು ಇದಕ್ಕಿಂತಲೂ ಹೆಚ್ಚು ಕ್ರೂರವಾಗಿದೆ. ಸಮಾಜದಲ್ಲಿ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ,ಯಾರೂ ಆ ಬಗ್ಗೆ ಮಾತನಾಡುವುದಿಲ್ಲ ಅಥವಾ ಏನನ್ನೂ ಮಾಡುವುದಿಲ್ಲ. ಮೌನವು ಲಾಕ್-ಅಪ್ನಲ್ಲಿ ನಡೆಯುವ ಚಿತ್ರಹಿಂಸೆಗಿಂತಲೂ ಹೆಚ್ಚು ಕ್ರೂರವಾಗಿದೆ. ಪಡಿತರ ಚೀಟಿ ಅಥವಾ ಸೂಕ್ತ ದಾಖಲೆಗಳನ್ನು ಹೊಂದಿರದ ಅಗೋಚರ ವ್ಯಕ್ತಿಗಳನ್ನು ನಮ್ಮ ಮಧ್ಯದಿಂದಲೇ ಎಳೆದೊಯ್ಯಲಾಗುತ್ತದೆ ಮತ್ತು ಯಾರೂ ಅದನ್ನು ಆಕ್ಷೇಪಿಸುವುದಿಲ್ಲ. ಅವರನ್ನು ನಾಗರಿಕರು ಎಂದು ಪರಿಗಣಿಸಿಯೂ ಇಲ್ಲ. ಜೈ ಭೀಮ್ ಚಿತ್ರವು ಈ ವೌನವನ್ನು ಮುರಿಯುವ,ನಾವೆಲ್ಲರೂ ಜವಾಬ್ದಾರಿಯನ್ನು ಮತ್ತು ವಹಿಸಬೇಕಾದ ಪಾತ್ರವನ್ನು ಹೊಂದಿದ್ದೇವೆ ಎನ್ನುವುದರ ಕುರಿತಾಗಿದೆ ’ ಎಂದರು.
ಈ ಕಡೆಗಣಿಸಲ್ಪಟ್ಟಿರುವ ಭಾರತೀಯರ ಬೆಂಬಲಕ್ಕೆ ನಿಂತಿರುವ ವಕೀಲ ಚಂದ್ರು ಪಾತ್ರವನ್ನು ಖ್ಯಾತ ತಮಿಳು ನಟ ಸೂರ್ಯ ನಿರ್ವಹಿಸಿದ್ದಾರೆ. ಮದ್ರಾಸ್ ಉಚ್ಚ ನ್ಯಾಯಾಲಯದ ಮಾಜಿ ನ್ಯಾಯಾಧೀಶ ಕೆ.ಚಂದ್ರು ಅವರನ್ನು ಆಧರಿಸಿ ಈ ಪಾತ್ರವನ್ನು ರೂಪಿಸಲಾಗಿದೆ. ಮಾಜಿ ಸಿಪಿಎಂ ಸದಸ್ಯರಾಗಿರುವ ಚಂದ್ರು ನ್ಯಾಯಾಧೀಶರಾಗಿ ತನ್ನ ಅಧಿಕಾರಾವಧಿಯಂತೆ ತನ್ನ ಸಮಾಜಪರ ವಕಾಲತ್ತುಗಳಿಗಾಗಿ ವ್ಯಾಪಕವಾದ ಗೌರವಕ್ಕೆ ಪಾತ್ರರಾಗಿದ್ದಾರೆ.

‘ಮಾನವ ಹಕ್ಕು ವಿಷಯಗಳಿಗೆ ಸಂಬಂಧಿಸಿದಂತೆ ನಾನು ನಿರ್ವಹಿಸಿರುವ ಪ್ರಕರಣಗಳು ಖಂಡಿತವಾಗಿಯೂ ಸರಕಾರದ ನೈಜ ಸ್ವರೂಪವನ್ನು ಮತ್ತು ಅದು ಎಷ್ಟು ಹಿಂಸಾತ್ಮಕ ವ್ಯವಸ್ಥೆಯಾಗಿದೆ ಎನ್ನುವುದನ್ನು ತೋರಿಸಿವೆ ’ಎಂದು ಚಿತ್ರ ಬಿಡುಗಡೆಯ ಬಳಿಕ Live Law ಜಾಲತಾಣಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿರುವ ಚಂದ್ರು,ಅಪರಾಧಿಗಳಿಗೆ ಸಕಾಲದಲ್ಲಿ ಶಿಕ್ಷೆಯಾದರೆ ಮಾತ್ರ ಸಂತ್ರಸ್ತರಿಗೆ ನ್ಯಾಯಾಂಗದಲ್ಲಿಯ ನಂಬಿಕೆ ಹೆಚ್ಚುತ್ತದೆ ಎಂದಿದ್ದಾರೆ.
ಜ್ಞಾನವೇಲ್ ಹಿಂದೆ ತಮಿಳು ಮ್ಯಾಗಝಿನ್ ‘ವಿಕಟನ್ ’ನ ವರದಿಗಾರರಾಗಿದ್ದಾಗ ಹಲವಾರು ಸಂದರ್ಭಗಳಲ್ಲಿ ಚಂದ್ರು ಅವರನ್ನು ಭೇಟಿಯಾಗಿದ್ದರು. ‘ನಾನು ಆರಂಭದಲ್ಲಿ ನ್ಯಾ.ಚಂದ್ರು ಅವರ ಬಗ್ಗೆ ಸಾಕ್ಷಚಿತ್ರವನ್ನು ನಿರ್ಮಿಸಲು ಯೋಚಿಸಿದ್ದೆ. ಆದರೆ ಅವರು ಬೇಡ,ವ್ಯಕ್ತಿಯನ್ನು ಕೇಂದ್ರೀಕರಿಸಿ ಮಾಡಬೇಡಿ ಎಂದು ತಿಳಿಸಿದ್ದರು ’ಎಂದು ಜ್ಞಾನವೇಲ್ ನೆನಪಿಸಿಕೊಂಡರು.
ವಕೀಲರಾಗಿ ನಿಮ್ಮ ವೃತ್ತಿಜೀವನದಲ್ಲಿ ಅತ್ಯಂತ ಆಸಕ್ತಕರ ಪ್ರಕರಣ ಯಾವುದಾಗಿತ್ತು ಎಂಬ ಜ್ಞಾನವೇಲ್ ಪ್ರಶ್ನೆಗೆ ಉತ್ತರವಾಗಿ ಚಂದ್ರು 1993ರಲ್ಲಿ ನಡೆದಿದ್ದ ಘಟನೆಯೊಂದನ್ನು ಉಲ್ಲೇಖಿಸಿದ್ದರು. ಕುರವ ಜನಾಂಗಕ್ಕೆ ಸೇರಿದ ರಾಜಕಣ್ಣು ಎಂಬ ವ್ಯಕ್ತಿ ಬಂಧನಕ್ಕೊಳಗಾಗಿ ಬಳಿಕ ಪೊಲೀಸ್ ಲಾಕಪ್ನಲ್ಲಿ ಕೊಲ್ಲಲ್ಪಟ್ಟಿದ್ದ. ಆತನ ಪತ್ನಿ ಪಾರ್ವತಿ (ಜೈ ಭೀಮ್ ಚಿತ್ರದಲ್ಲಿ ಸೆಂಗಾಣಿ ಪಾತ್ರ)ಯ ಪರವಾಗಿ ನ್ಯಾಯಾಲಯದಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಸಲ್ಲಿಸಿದ್ದ ಚಂದ್ರು ಆರೋಪಿ ಪೊಲೀಸ್ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮವನ್ನು ಖಚಿತಪಡಿಸಿದ್ದರು.
ಜ್ಞಾನವೇಲ್ ಮೂರು ವರ್ಷಗಳ ಹಿಂದೆ ಚಿತ್ರದ ಕಥೆಯನ್ನು ಬರೆಯಲು ಆರಂಭಿಸಿದ್ದರು. ಹಾವುಗಳು ಮತ್ತು ಇಲಿಗಳನ್ನು ಹಿಡಿಯುವುದು ಸೇರಿದಂತೆ ಸಾಂಪ್ರದಾಯಿಕ ಜೀವನೋಪಾಯಗಳನ್ನು ಹೊಂದಿರುವ ಇರುಳ ಬುಡಕಟ್ಟು ಅತ್ಯಂತ ಹೆಚ್ಚು ಶೋಷಿತ ಜನಾಂಗವಾಗಿದ್ದರಿಂದ ಅವರು ರಾಜಕಣ್ಣುವಿನ ಬುಡಕಟ್ಟನ್ನು ಕುರವದಿಂದ ಇರುಳ ಬುಡಕಟ್ಟಿಗೆ ಬದಲಿಸಿದ್ದರು.
ಜೈ ಭೀಮ್ ಚಿತ್ರದಲ್ಲಿ ರಾಜಕಣ್ಣು (ಮಣಿಕಂದನ್ ಈ ಪಾತ್ರವನ್ನು ನಿರ್ವಹಿಸಿದ್ದಾರೆ) ತನ್ನ ವೃತ್ತಿಯಿಂದಾಗಿಯೇ ಸಂಕಷ್ಟದಲ್ಲಿ ಸಿಕ್ಕಿಹಾಕಿಕೊಳ್ಳುತ್ತಾನೆ, ಜಮೀನುದಾರನೋರ್ವನ ಮನೆಯಲ್ಲಿ ಹಾವು ಹಿಡಿಯಲೆಂದು ಕರೆಸಲ್ಪಟ್ಟಿದ್ದ ರಾಜಕಣ್ಣು ಮತ್ತು ಆತನ ಸಂಬಂಧಿಗಳ ಮೇಲೆ ಅಲ್ಲಿ ಚಿನ್ನಾಭರಣಗಳನ್ನು ಕಳ್ಳತನ ಮಾಡಿದ ಆರೋಪವನ್ನು ಹೊರಿಸಲಾಗುತ್ತದೆ.
ಕಾನೂನಿನ ವಿವಿಧ ಮಗ್ಗಲುಗಳು ಮತ್ತು ಇರುಳರ ಜೀವನದ ಬಗ್ಗೆ ಅಧ್ಯಯನವು ಹೆಚ್ಚಿನ ಸಮಯವನ್ನು ತೆಗೆದುಕೊಂಡಿತ್ತು ಎಂದು 2017ರಲ್ಲಿ ‘ಕೂಟತ್ತಿಲ್ ಒರುತನ್’ಚಿತ್ರವನ್ನು ನಿರ್ದೇಶಿಸಿದ್ದ 40ರ ಹರೆಯದ ಜ್ಞಾನವೇಲ್ ತಿಳಿಸಿದರು.
ಸೂರ್ಯ ಮತ್ತು ಅವರ ತಾರಾಪತ್ನಿ ಜ್ಯೋತಿಕಾರ ಒಡೆತನದ 2ಡಿ ಎಂಟರಟೇನ್ಮೆಂಟ್ ಜೈ ಭೀಮ್ ಚಿತ್ರವನ್ನು ನಿರ್ಮಿಸಿದೆ. ‘ನಾನು ಪ್ರಾರಂಭದಲ್ಲಿ ಚಿತ್ರ ನಿರ್ಮಾಣಕ್ಕಾಗಿ ಅವರನ್ನು ಸಂಪರ್ಕಿಸಿದ್ದೆ ಮತ್ತು ಐದೇ ನಿಮಿಷಗಳಲ್ಲಿ ಅವರು ಒಪ್ಪಿಕೊಂಡಿದ್ದರು ’ಎಂದು ಹೇಳಿದ ಜ್ಞಾನವೇಲ್,ವಕೀಲನ ಪಾತ್ರಕ್ಕೆ ಯಾರನ್ನೂ ಗೊತ್ತು ಮಾಡಿರದಿದ್ದರೆ ತಾನೇ ಅದನ್ನು ನಿರ್ವಹಿಸಲು ಬಯಸುವುದಾಗಿಯೂ ಸೂರ್ಯ ತಿಳಿಸಿದ್ದರು ಎಂದರು.

ಸೂರ್ಯರ ಉಪಸ್ಥಿತಿಯು ಚಿತ್ರಕ್ಕೆ ಬಹಳ ದೊಡ್ಡ ಹರವನ್ನು ನೀಡಿದೆ ಎಂದು ಜ್ಞಾನವೇಲ್ ಒಪ್ಪಿಕೊಂಡರು. ಸೂರ್ಯ ಆ ಪಾತ್ರವನ್ನು ನಿರ್ವಹಿಸುತ್ತಿರುವುದು ಚಿತ್ರಗಳಲ್ಲಿ ಪ್ರತಿ ವೈಭವೀಕೃತ ಸೂಪರ್ಕಾಪ್ ಪಾತ್ರಕ್ಕೆ (ಇವುಗಳ ಪೈಕಿ ಕೆಲವನ್ನು ಸೂರ್ಯ ಕೂಡ ನಿರ್ವಹಿಸಿದ್ದಾರೆ) ಇನ್ನೊಂದು ಮುಖವಿದೆ ಹಾಗೂ ಅದನ್ನು ತೋರಿಸುವ ಮತ್ತು ನೋಡುವ ಅಗತ್ಯವಿದೆ ಎಂಬ ಪರಿಕಲ್ಪನೆಗೆ ಒತ್ತು ನೀಡಲು ಜ್ಞಾನವೇಲ್ಗೆ ನೆರವಾಗಿತ್ತು.
2019ರಲ್ಲಿ ಚಿತ್ರದ ನಿರ್ಮಾಣ ಆರಂಭಗೊಂಡಿತ್ತಾದರೂ ಕೋವಿಡ್ ಲಾಕ್ಡೌನ್ಗಳಿಂದಾಗಿ ವ್ಯತ್ಯಯವುಂಟಾಗಿತ್ತು. ಜೈ ಭೀಮ್ನ್ನು ಥಿಯೇಟರ್ಗಳಲ್ಲಿ ಸಾಂಪ್ರದಾಯಿಕವಾಗಿ ಬಿಡುಗಡೆಗೊಳಿಸಲು ಮೊದಲಿಗೆ ಉದ್ದೇಶಿಸಲಾಗಿತ್ತಾದರೂ ತಮಿಳುನಾಡಿನಲ್ಲಿ ಚಲನಚಿತ್ರ ಮಂದಿರಗಳು ಎಂದು ಪುನರಾರಂಭಗೊಳ್ಳುತ್ತವೆ ಎಂಬ ಬಗ್ಗೆ ಸ್ವಷ್ಟತೆ ಇರಲಿಲ್ಲವಾದ್ದರಿಂದ ಅದನ್ನು ಅಮೆಝಾನ್ ಪ್ರೈಮ್ ವೀಡಿಯೊದಲ್ಲಿ ಬಿಡುಗಡೆಗೊಳಿಸಲಾಗಿತ್ತು.
‘ಥಿಯೇಟರ್ನಲ್ಲಿ ಚಿತ್ರದ ಪರಿಣಾಮವನ್ನು ನೋಡಲು ನಾವು ಬಯಸಿದ್ದೆವು,ಅದರೆ ಈಗ ಇಡೀ ವಿಶ್ವದಲ್ಲಿ ಅದರ ಪರಿಣಾಮ ಕಾಣುತ್ತಿದೆ ’ ಎಂದು ಜ್ಞಾನವೇಲ್ ಹೇಳಿದರು.
ನಿರ್ದಿಷ್ಟ ಪ್ರಕರಣದ ಕುರಿತು ಚಿತ್ರವೊಂದು ಅಧಿಕಾರ ದುರುಪಯೋಗದ ಇಂತಹ ನಿದರ್ಶನಗಳು ಎಲ್ಲೆಲ್ಲಿ ಅಸ್ತಿತ್ವದಲ್ಲಿದೆಯೋ ಅಲ್ಲೆಲ್ಲ ಪ್ರತಿಧ್ವನಿಸುವ ಶಕ್ತಿಯನ್ನು ಹೊಂದಿದೆ ಮತ್ತು ಇಂತಹ ನಿದರ್ಶನಗಳು ಎಲ್ಲೆಲ್ಲಿಯೂ ಇರುತ್ತವೆ.
ಕೃಪೆ: Scroll.in
Photos: 2D Entertainment/Amazon Prime Video







