ಟ್ವೆಂಟಿ-20 ಕ್ರಿಕೆಟ್: 400 ವಿಕೆಟ್ ಮೈಲುಗಲ್ಲು ತಲುಪಿದ ರಶೀದ್ ಖಾನ್

photo: AFP
ಅಬುಧಾಬಿ, ನ.7: ಅಫ್ಘಾನಿಸ್ತಾನದ ಪ್ರಮುಖ ಲೆಗ್-ಸ್ಪಿನ್ನರ್ ರಶೀದ್ ಖಾನ್ ಸ್ಪರ್ಧಾತ್ಮಕ ಟ್ವೆಂಟಿ-20 ಕ್ರಿಕೆಟ್ನಲ್ಲಿ 400ನೇ ವಿಕೆಟ್ ಪಡೆದರು. ನ್ಯೂಝಿಲ್ಯಾಂಡ್ ವಿರುದ್ಧ ರವಿವಾರ ನಡೆದ ಟ್ವೆಂಟಿ-20 ವಿಶ್ವಕಪ್ ಪಂದ್ಯದ ವೇಳೆ ರಶೀದ್ ಈ ಸಾಧನೆ ಮಾಡಿದರು.
23ರ ಹರೆಯದ ಸ್ಪಿನ್ನರ್ ರಶೀದ್ ಕಿವೀಸ್ ಇನಿಂಗ್ಸ್ನ 9ನೇ ಓವರ್ನಲ್ಲಿ ನ್ಯೂಝಿಲ್ಯಾಂಡ್ ಆರಂಭಿಕ ಬ್ಯಾಟ್ಸ್ಮನ್ ಮಾರ್ಟಿನ್ ಗಪ್ಟಿಲ್ರನ್ನು ಕ್ಲೀನ್ ಬೌಲ್ಡ್ ಮಾಡುವುದರೊಂದಿಗೆ ಈ ಮೈಲುಗಲ್ಲು ತಲುಪಿದರು. ರಶೀದ್ ತನ್ನ 289ನೇ ಟ್ವೆಂಟಿ-20 ಪಂದ್ಯದಲ್ಲಿ ಈ ಸಾಧನೆ ಮಾಡಿದರು.
ಟ್ವೆಂಟಿ-20 ಕ್ರಿಕೆಟ್ನಲ್ಲಿ ಇತರ ಮೂವರು ಬೌಲರ್ಗಳು 400ಕ್ಕೂ ಅಧಿಕ ವಿಕೆಟ್ ಪಡೆದಿದ್ದಾರೆ. ಡ್ವೇಯ್ನಾ ಬ್ರಾವೊ 364ನೇ ಪಂದ್ಯದಲ್ಲಿ ಈ ಸಾಧನೆ ಮಾಡಿದ ಮೊದಲ ಬೌಲರ್ ಎನಿಸಿಕೊಂಡಿದ್ದರು. ಟ್ವೆಂಟಿ-20 ಕ್ರಿಕೆಟ್ನಲ್ಲಿ 500 ವಿಕೆಟ್ಗಳನ್ನು ಪಡೆದ ಮೊದಲ ಬೌಲರ್ ಎಂಬ ಹಿರಿಮೆಗೂ ಬ್ರಾವೊ ಪಾತ್ರರಾಗಿದ್ದಾರೆ. ಟ್ವೆಂಟಿ-20 ಅಂತರ್ರಾಷ್ಟ್ರೀಯ ಕ್ರಿಕೆಟಿನಿಂದ ಈಗಷ್ಟೇ ನಿವೃತ್ತಿ ಘೋಷಿಸಿರುವ ವೆಸ್ಟ್ಇಂಡೀಸ್ ಆಲ್ರೌಂಡರ್ 512 ಪಂದ್ಯಗಳಲ್ಲಿ 553 ವಿಕೆಟ್ಗಳನ್ನು ಕಬಳಿಸಿದ್ದಾರೆ.
400ಕ್ಕೂ ಅಧಿಕ ವಿಕೆಟ್ ಪಡೆದ ಇತರ ಇಬ್ಬರು ಬೌಲರ್ಗಳೆಂದರೆ ಇಮ್ರಾನ್ ತಾಹಿರ್(320 ಪಂದ್ಯಗಳು)ಹಾಗೂ ಸುನೀಲ್ ನರೇನ್(362 ಪಂದ್ಯಗಳು)ಈ ಇಬ್ಬರು ಈ ವರ್ಷಾರಂಭದಲ್ಲಿ ಈ ಮೈಲುಗಲ್ಲು ತಲುಪಿದ್ದರು.
ರಶೀದ್ ಕ್ಯಾಲೆಂಡರ್ ವರ್ಷದಲ್ಲಿ ಹೆಚ್ಚು ಟ್ವೆಂಟಿ-20 ವಿಕೆಟ್ ಪಡೆದ ಸಾಧನೆಯನ್ನೂ ಮಾಡಿದ್ದರು. 2018ರಲ್ಲಿ ಅವರು ಒಟ್ಟು 96 ವಿಕೆಟ್ಗಳನ್ನು ಪಡೆದಿದ್ದರು. ರಶೀದ್ ಇಕಾನಮಿ ರೇಟ್(6.34)200 ಟ್ವೆಂಟಿ-20 ಪಂದ್ಯಗಳನ್ನಾಡಿರುವ ವೆಸ್ಟ್ಇಂಡೀಸ್ನ ನರೇನ್ ನಂತರ ಎರಡನೇ ಶ್ರೇಷ್ಠಮಟ್ಟದಲ್ಲಿದೆ.
ಇದೇ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧದ ಸೂಪರ್-12 ಪಂದ್ಯದಲ್ಲಿ ರಶೀದ್ ಅವರು ಟ್ವೆಂಟಿ-20 ಅಂತರ್ ರಾಷ್ಟ್ರೀಯ ಕ್ರಿಕೆಟ್ನಲ್ಲಿ ವೇಗವಾಗಿ 100 ವಿಕೆಟ್ ಪಡೆದ ಸಾಧನೆ ಮಾಡಿದ್ದರು. ಟಿಮ್ ಸೌಥಿ, ಶಾಕಿಬ್ ಅಲ್ ಹಸನ್ ಹಾಗೂ ಲಸಿತ್ ಮಾಲಿಂಗ ಬಳಿಕ ಟ್ವೆಂಟಿ-20ಯಲ್ಲಿ 100 ವಿಕೆಟ್ ಪಡೆದ ನಾಲ್ಕನೇ ಬೌಲರ್ ಎಂಬ ಕೀರ್ತಿಗೆ ಭಾಜನರಾಗಿದ್ದರು.







