ಎಲ್ಲರಿಗೂ ನ್ಯಾಯ ತಲುಪಲು ಮಾಧ್ಯಮಗಳು ನ್ಯಾಯಾಂಗದ ಜೊತೆ ಕೈಜೋಡಿಸಬೇಕಿದೆ: ನ್ಯಾ. ವೀರಪ್ಪ

ತುಮಕೂರು,ನ.07:ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ಸಂವಿಧಾನದ ಆಶಯಗಳ ಈಡೇರಬೇ ಕಾದರೆ,ಎಲ್ಲರಿಗೂ ಸಮರ್ಪಕವಾಗಿ ನ್ಯಾಯ ದೊರೆಯುವಂತೆ ಮಾಡಲು ಮಾಧ್ಯಮಗಳು,ನ್ಯಾಯಾಂಗ ದೊಂದಿಗೆ ಕೈಜೋಡಿಸಿ ಕೆಲಸ ಮಾಡಬೇಕಾಗಿದೆ ಎಂದು ಕಾನೂನು ಸೇವಾ ಪ್ರಾಧಿಕಾರದ ಮುಖ್ಯಸ್ಥ ಹಾಗೂ ಹೈಕೋರ್ಟ ನ್ಯಾಯಾಧೀಶರಾದ ಬಿ.ವೀರಪ್ಪ ತಿಳಿಸಿದ್ದಾರೆ.
ನಗರದ ಗಾಜಿನಮನೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಪೊಲೀಸ್, ಜಿಲ್ಲಾ ವಕೀಲರ ಸಂಘದ ಸಹಯೋಗದಲ್ಲಿ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಪ್ಯಾನ್ ಇಂಡಿಯಾ ಕಾನೂನು ಅರಿವು ಅಭಿಯಾನ ಉದ್ಘಾಟಿಸಿ ಮಾತನಾಡುತಿದ್ದ ಅವರು,ಶಾಸಕಾಂಗ ಮತ್ತು ಕಾರ್ಯಾಂಗಗಳು ಶೀಥಿಲವಾಗಿದ್ದು,ನ್ಯಾಯಾಂಗದ ಜೊತೆಗೆ ಪತ್ರಿಕಾರಂಗ ಕೈಜೋಡಿಸಿದರೆ ಜನರಿಗೆ ಹೆಚ್ಚಿನ ನೆರವು ನೀಡಬಹುದೆಂದರು.
ಸರ್ವರಿಗೂ ನ್ಯಾಯ ಪಡೆಯುವ ಸೌಲಭ್ಯ ಕಲ್ಪಿಸುವುದು ಸಂವಿಧಾನ ಹಕ್ಕು, ತಾರತಮ್ಯಕ್ಕೆ ಒಳಗಾಗದೇ ನ್ಯಾಯ ಒದಗಿಸಲು ಕಾನೂನಿನ ಅರಿವು ಮತ್ತು ನೆರವು ಇದೆ.ನ್ಯಾಯದಾನ ಪ್ರತಿಯೊಬ್ಬರಿಗೂ ತಲುಪಲು ಹಳ್ಳಿ ಹಳ್ಳಿಯಲ್ಲಿಯೂ ಅರಿವು ಮೂಡಿಸುತ್ತಿರುವುದು ಹೆಮ್ಮೆಯ ವಿಷಯ, ದೇಶದ ರಕ್ಷಿಸಲು ಸೈನಿಕರಿದ್ದಂತೆ, ಅನ್ಯಾಯ, ಅಕ್ರಮ, ದಬ್ಬಾಳಿಕೆ ಸರಿಪಡಿಸಲು ನ್ಯಾಯಾಂಗ ಇಲಾಖೆ ಕಾರ್ಯನಿರ್ವಹಿಸುತ್ತಿದೆ, ನ್ಯಾಯದಾನದ ಜೊತೆಗೆ ಅರಿವು ಮೂಡಿಸುತ್ತಿದೆ, ಜಿಲ್ಲೆಗೆ ಲೋಕ ಅದಾಲತ್ ನಲ್ಲಿ ನಾಲ್ಕು ಬಾರಿ ಪ್ರಥಮ ಸ್ಥಾನ ದೊರೆತಿದೆ ಎಂದು ನ್ಯಾ.ಬಿ.ವೀರಪ್ಪ ಶ್ಲಾಘಿಸಿದರು.
ದೇಶದಲ್ಲಿ ಶಿಕ್ಷಿತರಿದ್ದರು ಕಾನೂನಿನ ಅರಿವಿಲ್ಲ ಹಾಗಾಗಿಯೇ ಕಟ್ಟಕಡೆಯ ವ್ಯಕ್ತಿಗೆ ನ್ಯಾಯ ಒದಗಿಸಲು ಸಾಧ್ಯವಿಲ್ಲ ಇದನ್ನು ಮನಗಂಡು ಪ್ರಾರಂಭವಾದ ಕಾನೂನು ಸೇವಾ ಪ್ರಾಧಿಕಾರದಿಂದ ನ್ಯಾಯ ಕೊಡಿಸುವ ವ್ಯವಸ್ಥೆ ಮಾಡಲಾಗಿದೆ, ಜೀವನದಲ್ಲಿ ಎದುರಾಗುವ ಸಮಸ್ಯೆ ಎದುರಿಸಲು ಕಾನೂನಿನ ಅರಿವು ಹೊಂದುವುದು ಅವಶ್ಯಕ ಎಂದು ಸಲಹೆ ನೀಡಿದರು.
ಹಣ, ಅಧಿಕಾರದ ವ್ಯಾಮೋಹಕ್ಕಾಗಿ ಪೋಷಕರನ್ನು ತೊರೆದಿರುವ ಮಕ್ಕಳಿಂದ ಆಗುವ ತೊಂದರೆ ತಪ್ಪಿಸಲು ಹಿರಿಯ ನಾಗರೀಕರ ಕಾಯ್ದೆ ಜಾರಿಗೆ ತಂದಿದ್ದು,ಮಕ್ಕಳು ತಮ್ಮನ್ನು ನೋಡಿಕೊಳ್ಳದಿದ್ದರೆ ನಿಮ್ಮ ಆಸ್ತಿಯನ್ನು ಪಡೆದುಕೊಳ್ಳ ಬಹುದಾಗಿದೆ ಎಂದ ಅವರು,ಹಿರಿಯ ನಾಗರೀಕರು ಈ ಸೌಲಭ್ಯ ಪಡೆದುಕೊಳ್ಳಬೇಕು.ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಭಾಗಿಯಾಗುವ, ಹೆಣ್ಣು ಮಕ್ಕಳ ಮೇಲೆ ಆಸಿಡ್ ದಾಳಿ ಮಾಡುವವರನ್ನು ಗಲ್ಲಿಗೇರಿಸಬೇಕು ಎಂದು ಭಾರತ ಸರಕಾರಕ್ಕೆ ಶಿಫಾರಸು ಮಾಡಿದ್ದೇನೆ, ಕಾನೂನು ಎದುರಿಸುವ ಧೈರ್ಯ ಬೇಕಾದರೆ ಕಾನೂನು ಅರಿವು ಪಡೆಯುವುದು ಅವಶ್ಯಕವಾಗಿದೆ. ಕಾನೂನಿನ ಜಾಗೃತಿ ಮೂಡಿಸುತ್ತಿದ್ದರು ಅದರ ಉಪಯೋಗ ಪಡೆದೇ ಇರುವುದು ದುರದೃಷ್ಟಕರ ಎಂದು ನ್ಯಾ.ಬಿ.ವೀರಪ್ಪ ಹೇಳಿದರು.
ನ್ಯಾಯಮೂರ್ತಿ ಜಿ.ನರೇಂದರ್ ಮಾತನಾಡಿ, ಸರಕಾರದಿಂದ ದೊರೆಯುವ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸುವ ವಸ್ತು ಪ್ರದರ್ಶನ ಏರ್ಪಡಿಸಿರುವುದು ಉತ್ತಮ ವಿಚಾರವಾಗಿದ್ದು, ತುಮಕೂರು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯ ಶ್ಲಾಘನೀಯ.ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಪ್ರಾರಂಭಿಸಿರುವ ಲೀಗಲ್ ಸರ್ವಿಸ್ ಕ್ರೆಡಿಟ್ ಕಾರ್ಪ್ ಸ್ವಯಂ ಸೇವಕರ ತಂಡ,ವಿದ್ಯಾರ್ಥಿಗಳ ತಂಡದ ಮೂಲಕ ಕಾನೂನು ಸೇವೆತ ಅರಿವು ಮೂಡಿಸುತ್ತಿರುವುದು ಮಾದರಿಯಾಗಿದ್ದು, ನ್ಯಾಯಾಂಗದ ಆಡಳಿತ ವ್ಯವಸ್ಥೆಯಲ್ಲಿ ತುಮಕೂರು ಸದಾ ಮುಂದಿದೆ ಎಂದು ಪ್ರಶಂಸಿದರು.
ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ. ಹೆಚ್.ಶಶಿಧರ ಶೆಟ್ಟಿ ಮಾತನಾಡಿ,ನ್ಯಾಯಾಲಯಗಳಲ್ಲಿ ಕಾನೂನು ಸೇವಾ ಪ್ರಾಧಿಕಾರದ ನೆರವು ಪಡೆದವರು ಶೇ.1ರಷ್ಟು,ಕಾನೂನು ಸೇವಾ ಪ್ರಾಧಿಕಾರದ ಬಗ್ಗೆ ಅರಿವು ಮೂಡಿಸಲು ಪ್ಯಾನ್ ಇಂಡಿಯಾ ಅಭಿಯಾನ ಹಮ್ಮಿಕೊಳ್ಳಲಾಗಿದೆ.ರಾಜ್ಯದಲ್ಲಿರುವ 29 ಸಾವಿರ ಹಳ್ಳಿಗಳಲ್ಲಿಯೂ ಕಾನೂನಿನ ಸೇವಾ ಪ್ರಾಧಿಕಾರದ ಅರಿವು ಮೂಡಿಸಲು ಅಭಿಯಾನದಲ್ಲಿ ಯೋಜನೆ ರೂಪಿಸಲಾಗಿದೆ,ಉಚಿತವಾಗಿ ಕಾನೂನು ಸೇವೆ ಪಡೆಯಬಹುದೆಂಬ ಅರಿವು ಮೂಡಿಸಬೇಕಾದ ಅನಿವಾರ್ಯತೆ ಇದೆ, ಮಹಿಳೆ, ಮಕ್ಕಳು, ಹಿರಿಯನಾಗರೀಕರು ಸೇರಿದಂತೆ ಎಲ್ಲರಿಗೂ ಉಚಿತವಾದ ನೆರವು ಪಡೆದುಕೊಳ್ಳಲು ಕಾನೂನು ಸೇವಾ ಪ್ರಾಧಿಕಾರದ ನೆರವು ಪಡೆದುಕೊಳ್ಳಬಹುದಾಗಿದೆ ಎಂದರು.
ಜಿ.ಪಂ.ಸಿಇಒ ಡಾ.ವಿದ್ಯಾಕುಮಾರಿ ಮಾತನಾಡಿ,ನ್ಯಾಯಾಂಗ ಮತ್ತು ಕಾರ್ಯಾಂಗದ ಮುಖ್ಯ ಉದ್ದೇಶ ದುರ್ಬಲರಿಗೆ ನೆರವು ನೀಡುವುದು, ಸರಕಾರ ಮನೆಬಾಗಿಲಿಗೆ ಸೇವೆ ದೊರಕಿಸುವ ನಿಟ್ಟಿನಲ್ಲಿ ಸಕಾಲದಂತಹ ಯೋಜನೆಗಳನ್ನು ಜಾರಿಗೆ ತಂದಿದೆ, ಜನರು ಸಹಭಾಗಿತ್ವ ವಹಿಸಿದಾಗ ಮಾತ್ರ ಯೋಜನೆ ಯಶಸ್ವಿಯಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಧಾನ ನ್ಯಾಯಾಧೀಶರಾದ ಜಿ.ಎಸ್.ಸಂಗ್ರೇಶಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ,ರಾಘವೇಂದ್ರ ಶೆಟ್ಟಿಗಾರ್, ಎಸ್ಪಿ ರಾಹುಲ್ ಕುಮಾರ್ ಶಹಾಪೂರವಾಡ್,ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ದೊಡ್ಮನೆ ಗೋಪಾಲಗೌಡ ಸೇರಿದಂತೆ ಜಿಲ್ಲೆ ಮತ್ತು ತಾಲೂಕು ನ್ಯಾಯಾಲಯಗಳ ನ್ಯಾಯಾಧೀಶರು, ವಿವಿಧ ಇಲಾಖೆಗಳ ಅಧಿಕಾರಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.







