"ಆರ್ಯನ್ ಖಾನ್ ಅಪಹರಣ, ಸುಲಿಗೆ ಆಟವೆಲ್ಲಾ ಒಂದು ಸೆಲ್ಫಿಯಿಂದ ನಾಶವಾಯಿತು": ನವಾಬ್ ಮಲಿಕ್

ಮುಂಬೈ, ನ. 7: ಶಾರುಕ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಅವರನ್ನು ಸುಲಿಗೆ ಹಣಕ್ಕಾಗಿ ಅಪಹರಿಸಲಾಗಿತ್ತು . ಅವರ ಆಟ ಸೆಲ್ಫಿಯಿಂದಾಗಿ ನಾಶವಾಯಿತು ಎಂದು ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಅವರು ರವಿವಾರ ಆರೋಪಿಸಿದ್ದಾರೆ. ಈ ಅಪಹರಣ ಸಂಚಿನಲ್ಲಿ ಎನ್ಸಿಬಿಯ ಮುಂಬೈ ವಲಯ ನಿರ್ದೇಶಕ ಸಮೀರ್ ವಾಂಖೆಡೆ ಅವರು ಕೂಡ ಭಾಗಿಯಾಗಿದ್ದರು. ಬಿಜೆಪಿ ನಾಯಕ ಮೋಹಿತ್ ಕಾಂಬೋಜ್ ಅವರು ಸಂಚು ರೂಪಿಸಿದ್ದರು.
ಆರ್ಯನ್ ಖಾನ್ ಅಂಥವರನ್ನು ಆಮಿಷ ತೋರಿಸಿ ಹಡಗಿಗೆ ಸೆಳೆಯುವ ಹಾಗೂ ಅವರ ವಿರುದ್ಧ ಮಾದಕ ದ್ರವ್ಯ ಪ್ರಕರಣಗಳನ್ನು ರೂಪಿಸುವ ಪಿತೂರಿ ನಡೆಸಲಾಗಿದೆ ಎಂದು ಮಲಿಕ್ ಹೇಳಿದ್ದಾರೆ. ‘‘ಆರ್ಯನ್ ಖಾನ್ ಟಿಕೆಟ್ ತೆಗೆದುಕೊಂಡು ಹಡಗಿಗೆ ಹೋಗಿಲ್ಲ ಎಂದು ನ್ಯಾಯಾಲಯದಲ್ಲಿ ತಿಳಿಸಲಾಗಿದೆ.
ಅವರು ಪ್ರತೀಕ್ ಗಾಬಾ ಹಾಗೂ ಅಮೀರ್ ಫರ್ನೀಚರ್ವಾಲ ಅವರಿಗಾಗಿ ಹಡಗಿಗೆ ಹೋಗಿದ್ದರು. ಇದು ಅಪಹರಣ ಹಾಗೂ ಸುಲಿಗೆ ಪ್ರಕರಣ ಎಂದು ನಾನು ನೇರವಾಗಿ ಹೇಳಲು ಬಯಸುತ್ತೇನೆ’’ ಎಂದು ಮಲಿಕ್ ಅವರು ಪತ್ರಿಕಾ ಗೋಷ್ಠಿಯಲ್ಲಿ ಇಂದು ಹೇಳಿದ್ದಾರೆ. ‘‘ಬಿಜೆಪಿ ನಾಯಕ ಮೋಹಿತ್ ಕಾಂಬೋಜ್ ಅವರ ಸಂಬಂಧಿ ಇದಕ್ಕೆ ಬಲೆ ಹಾಕಿದ. ಆರ್ಯನ್ ಖಾನ್ ಅವರನ್ನು ಅಲ್ಲಿಗೆ ಕರೆದೊಯ್ಯಲಾಯಿತು. ಅನಂತರ ಅಪಹರಣ ಹಾಗೂ 25 ಕೋಟಿ ರೂಪಾಯಿ ಸುಲಿಗೆ ಹಣದ ಆಟ ಆರಂಭವಾಯಿತು. 18 ಕೋಟಿ ರೂಪಾಯಿಗೆ ಒಪ್ಪಂದ ಮಾಡಿಕೊಳ್ಳಲಾಯಿತು. 50 ಲಕ್ಷ ರೂಪಾಯಿ ಪಾವತಿಸಲಾಯಿತು. ಆದರೆ, ಸೆಲ್ಫಿ ಅವರ ಆಟವನ್ನು ನಾಶ ಮಾಡಿತು. ಇದು ಸತ್ಯ’’ ಎಂದು ಮಲಿಕ್ ಹೇಳಿದ್ದಾರೆ.
ಆದರೆ, ಅವರು ಯಾರ ಹೆಸರನ್ನೂ ಹೇಳಿಲ್ಲ. ಅವರು ಉಲ್ಲೇಖಿಸಿದ ಸೆಲ್ಫಿ ಖಾಸಗಿ ತನಿಖೆಗಾರ ಕೆ.ಪಿ. ಗೋಸಾವಿ ಅವರು ಆರ್ಯನ್ ಖಾನ್ ಅವರೊಂದಿಗೆ ತೆಗೆದುಕೊಂಡದ್ದು ಎಂಬುದು ಸ್ಪಷ್ಟ. ಅನಂತರ ಸಾಮಾಜಿಕ ಜಾಲ ತಾಣದಲ್ಲಿ ಅದೇ ಸೆಲ್ಫಿ ವೈರಲ್ ಆಗಿತ್ತು.
ಎನ್ಸಿಬಿಯ ಎಸ್ಐಟಿಯಿಂದ ಆರ್ಯನ್ ಖಾನ್ ಗೆ ಸಮನ್ಸ್
ಮುಂಬೈಗೆ ತಲುಪಿರುವ ಎನ್ಸಿಬಿಯ ವಿಶೇಷ ತನಿಖಾ ತಂಡ (ಎಸ್ಐಟಿ) ಮುಂಬೈಯ ಪ್ರಯಾಣಿಕ ಹಡಗಿನಲ್ಲಿ ಮಾದಕ ದ್ರವ್ಯ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿ ಬಾಲಿವುಡ್ ನಟ ಶಾರುಕ್ ಖಾನ್ ಅವರ ಪುತ್ರ ಆರ್ಯನ್ ಖಾನ್ಗೆ ಸಮನ್ಸ್ ಜಾರಿ ಮಾಡಿದೆ. ಕಳೆದ ತಿಂಗಳು ಆರ್ಯನ್ ಖಾನ್ ಬಂಧನಕ್ಕೆ ಕಾರಣವಾದ ಪ್ರಯಾಣಿಕ ಹಡಗಿನಲ್ಲಿ ಮಾದಕ ದ್ರವ್ಯ ಪತ್ತೆ ಪ್ರಕರಣ ಸೇರಿದಂತೆ 6 ಪ್ರಕರಣಗಳನ್ನು ಎನ್ಸಿಬಿಯ ಮುಂಬೈಯ ವಲಯ ಘಟಕದಿಂದ ವಿಶೇಷ ತನಿಖಾ ತಂಡ (ಎಸ್ಐಟಿ)ಕ್ಕೆ ಶುಕ್ರವಾರ ಹಸ್ತಾಂತರಿಸಲಾಗಿದೆ.
ಮಾದಕ ದ್ರವ್ಯ ಪ್ರಕರಣಕ್ಕೆ ಸಂಬಂಧಿಸಿ ಮಹಾರಾಷ್ಟ್ರದ ಸಚಿವ ನವಾಬ್ ಮಲಿಕ್ ಅವರ ಅಳಿಯ ಸಮೀರ್ ಖಾನ್ ಅವರ ಹೇಳಿಕೆಯನ್ನು ಕೂಡ ಎಸ್ಐಟಿ ದಾಖಲಿಸಿಕೊಳ್ಳುವ ನಿರೀಕ್ಷೆ ಇದೆ. ಪ್ರಸ್ತುತ ಜಾಮೀನಿನಲ್ಲಿರುವ ಸಮೀರ್ ಖಾನ್ ನನ್ನು ಎನ್ಸಿಬಿ ಕಳೆದ ವರ್ಷ ಜನವರಿಯಲ್ಲಿ ಬಂಧಿಸಿತ್ತು. ಮುಂಬೈ ಎನ್ಸಿಬಿಯಿಂದ ಹಸ್ತಾಂತರವಾದ 6 ಪ್ರಕರಣಗಳಿಗೆ ಸಂಬಂಧಿಸಿದ ಆರೋಪಿಗಳ ಹೇಳಿಕೆಯನ್ನು ಹಿರಿಯ ಐಪಿಎಸ್ ಅಧಿಕಾರಿ ಸಂಜಯ್ ಕುಮಾರ್ ಸಿಂಗ್ ಅವರ ಎಸ್ಐಟಿ ತಂಡ ದಾಖಲಿಸಿಕೊಳ್ಳಲು ಆರಂಭಿಸಿದೆ ಎಂದು ಸಿಂಗ್ ತಿಳಿಸಿದ್ದಾರೆ. ‘‘ನಾವು ಈ ಪ್ರಕರಣದ ತನಿಖೆ ಆರಂಭಿಸಿದ್ದೇವೆ. ಆರ್ಯನ್ ಖಾನ್ ಅವರಿಗೆ ಶನಿವಾರ ಸಮನ್ಸ್ ಜಾರಿಗೊಳಿಸಲಾಗಿದೆ ’’ ಎಂದು ಸಂಜಯ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ನವಾಬ್ ಮಲಿಕ್ ವಿರುದ್ಧ ಸಮೀರ್ ವಾಂಖೆಡೆ ತಂದೆಯಿಂದ ಮಾನನಷ್ಟ ಮೊಕದ್ದಮೆ ದಾಖಲು
ಮಹಾರಾಷ್ಟ್ರ ಸಚಿವ ಹಾಗೂ ಎನ್ಸಿಪಿ ನಾಯಕ ನವಾಬ್ ಮಲಿಕ್ ಅವರ ವಿರುದ್ಧ ಎನ್ಸಿಬಿ ಮುಂಬೈಯ ವಲಯ ನಿರ್ದೇಶಕ ಸಮೀರ್ ವಾಂಖೆಡೆ ಅವರ ತಂದೆ ಧ್ಯಾನ್ದೇವ್ ವಾಂಖೆಡೆ ಅವರು ಬಾಂಬೆ ಉಚ್ಚ ನ್ಯಾಯಾಲಯದಲ್ಲಿ ರವಿವಾರ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ಸುಲಿಗೆ ಹಣಕ್ಕೆ ಬೇಡಿಕೆ ಇರಿಸಿದ ಆರೋಪದ ಹಿನ್ನೆಲೆಯಲ್ಲಿ ಮೋಹಿತ್ ಕಾಂಬೋಜ್ ಅನ್ನು ಪಿತೂರಿಗಾರ ಹಾಗೂ ಸಮೀರ್ ವಾಂಖೆಡೆಯ ಪಾಲುದಾರ ಎಂದು ಕರೆದು ಮಹಾರಾಷ್ಟ್ರದ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಹಾಗೂ ಎನ್ಸಿಪಿಯ ನಾಯಕ ನವಾಬ್ ಮಲಿಕ್ ತರಾಟೆಗೆ ತೆಗೆದುಕೊಂಡಿದ್ದರು.







