ವಿಶ್ವಕಪ್: ಸತತ ಐದನೇ ಪಂದ್ಯದಲ್ಲಿ ಪಾಕಿಸ್ತಾನಕ್ಕೆ ಜಯ
ಶುಐಬ್ ಮಲಿಕ್ ಪಂದ್ಯಶ್ರೇಷ್ಠ

photo: AFP
ಶಾರ್ಜಾ, ನ.7: ಟ್ವೆಂಟಿ-20 ವಿಶ್ವಕಪ್ ನಲ್ಲಿ ಸೂಪರ್-12ರ ಸುತ್ತಿನ ತನ್ನ ಕೊನೆಯ ಪಂದ್ಯದಲ್ಲಿ ಪಾಕಿಸ್ತಾನ ತಂಡ ಸ್ಕಾಟ್ಲೆಂಡ್ ವಿರುದ್ಧ 72 ರನ್ ಗಳ ಅಂತರದಿಂದ ಗೆಲುವು ದಾಖಲಿಸಿದೆ. ಈ ಗೆಲುವಿನೊಂದಿಗೆ ಆಡಿರುವ ಎಲ್ಲ 5 ಪಂದ್ಯಗಳಲ್ಲಿ ಜಯ ಸಾಧಿಸಿ ಒಟ್ಟು 10 ಅಂಕ ಗಳಿಸಿ ಗ್ರೂಪ್-2ರ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದೆ. ಪಾಕ್ ಸೂಪರ್-12ರ ಹಂತದಲ್ಲಿ ಅಜೇಯ ಗೆಲುವಿನ ದಾಖಲೆಯೊಂದಿಗೆ ಸೆಮಿ ಫೈನಲ್ ತಲುಪಿದ ಏಕೈಕ ತಂಡ ಎನಿಸಿಕೊಂಡಿತು.
ಪಾಕ್ ನವೆಂಬರ್ 11ರಂದು ನಡೆಯಲಿರುವ 2ನೇ ಸೆಮಿ ಫೈನಲ್ ನಲ್ಲಿ ಆಸ್ಟ್ರೇಲಿಯ ತಂಡವನ್ನು ಎದುರಿಸಲಿದೆ. ನ.10ರಂದು ನಡೆಯಲಿರುವ ಮೊದಲ ಸೆಮಿಫೈನಲ್ ನಲ್ಲಿ ಇಂಗ್ಲೆಂಡ್ ಹಾಗೂ ನ್ಯೂಝಿಲ್ಯಾಂಡ್ ಸೆಣಸಾಡಲಿವೆ.
ರವಿವಾರ ನಡೆದ ಪಂದ್ಯದಲ್ಲಿ ಗೆಲ್ಲಲು 190 ರನ್ ಗುರಿ ಬೆನ್ನಟ್ಟಿದ್ದ ಸ್ಕಾಟ್ಲೆಂಡ್ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 117 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಪಾಕ್ ಪರ ಶಾದಾಬ್ ಖಾನ್(2-14)ಯಶಸ್ವಿ ಬೌಲರ್ ಎನಿಸಿಕೊಂಡರು. ಶಾಹೀನ್ ಅಫ್ರಿದಿ(1-24), ಹಾರಿಸ್ ರವೂಫ್(1-27) ಹಾಗೂ ಹಸನ್ ಅಲಿ(1-33)ತಲಾ ಒಂದು ವಿಕೆಟ್ ಪಡೆದರು. ಸ್ಕಾಟ್ಲೆಂಡ್ ಪರ ರಿಚಿ ಬೆರಿಂಗ್ಟನ್(ಔಟಾಗದೆ 54, 37 ಎಸೆತ)ಗರಿಷ್ಠ ಸ್ಕೋರ್ ಗಳಿಸಿದರು.
ಇದಕ್ಕೂ ಮೊದಲು ಟಾಸ್ ಜಯಿಸಿದ ಪಾಕಿಸ್ತಾನ 4 ವಿಕೆಟ್ ನಷ್ಟಕ್ಕೆ 189 ರನ್ ಗಳಿಸಿತ್ತು. ಇನಿಂಗ್ಸ್ ಆರಂಭಿಸಿದ ನಾಯಕ ಬಾಬರ್ ಆಝಂ ಹಾಗೂ ಮುಹಮ್ಮದ್ ರಿಝ್ವ್ನ್(15) ಮೊದಲ ವಿಕೆಟ್ಗೆ 35 ರನ್ ಗಳಿಸಿ ಸಾಧಾರಣ ಆರಂಭ ಒದಗಿಸಿದರು. ಮೂರನೇ ಕ್ರಮಾಂಕದಲ್ಲಿ ಆಡಿದ ಫಖರ್ ಝಮಾನ್(8)ಕಳಪೆ ಪ್ರದರ್ಶನ ಮುಂದುವರಿಸಿದರು.
ಮುಹಮ್ಮದ್ ಹಫೀಝ್ 31 ರನ್ ಗಳಿಸಿ ಔಟಾದರು. ಔಟಾಗುವ ಮೊದಲು ಬಾಬರ್ ಅವರೊಂದಿಗೆ 3ನೇ ವಿಕೆಟ್ಗೆ 53 ರನ್ ಸೇರಿಸಿದರು. ನಾಯಕ ಬಾಬರ್(66 ರನ್, 47 ಎಸೆತ, 5 ಬೌಂಡರಿ, 3 ಸಿಕ್ಸರ್)ಹಾಗೂ ಆಲ್ರೌಂಡರ್ ಶುಐಬ್ ಮಲಿಕ್(ಔಟಾಗದೆ 54, 18 ಎಸೆತ, 1 ಬೌಂಡರಿ, 6 ಸಿಕ್ಸರ್)ತಂಡವು ಸ್ಪರ್ಧಾತ್ಮಕ ಮೊತ್ತ ಗಳಿಸಲು ನೆರವಾದರು.
ಇನಿಂಗ್ಸ್ ಕೊನೆಯಲ್ಲಿ ಅಬ್ಬರಿಸಿದ ಮಲಿಕ್ ಅವರು ಅಸಿಫ್ ಅಲಿ ಅವರೊಂದಿಗೆ 5ನೇ ವಿಕೆಟಿಗೆ ಮುರಿಯದ ಜೊತೆಯಾಟದಲ್ಲಿ 47 ರನ್(15 ಎಸೆತ)ಕಲೆಹಾಕಿದರು. ಸ್ಕಾಟ್ಲೆಂಡ್ ಪರ ಕ್ರಿಸ್ ಗೀವ್ಸ್(2-43) ಯಶಸ್ವಿ ಬೌಲರ್ ಎನಿಸಿಕೊಂಡರು.







